ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಯಡಿಯೂರಪ್ಪ ಬೆಂಬಲಿತ ಆಕಾಂಕ್ಷಿಗಳು ನಿರಾಶರಾಗುವಂತಾಗಿದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೊನೆ ಕ್ಷಣದಲ್ಲಿ ಹೆಸರುಗಳ ಬದಲಾವಣೆ ಮಾಡಲಾಯಿತು. ಇಂದು ಬೆಳಗ್ಗೆವರೆಗೂ ಲಿಂಗರಾಜ್ ಪಾಟೀಲ್, ಕೇಶವ ಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಮಂಜುಳಾ ಹೆಸರುಗಳು ಪಟ್ಟಿಯಲ್ಲಿ ಇದ್ದವು. ಈ ನಾಲ್ವರಿಗೂ ಪಕ್ಷದ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸುವಂತೆ ನಿರ್ದೇಶನವನ್ನೂ ನೀಡಲಾಗಿತ್ತು. ಅದರಂತೆ ಲಿಂಗರಾಜ್ ಪಾಟೀಲ್ ಮತ್ತು ಮಂಜುಳಾ ಮುಂಜಾನೆಯೇ ಕಚೇರಿಗೆ ಆಗಮಿಸಿ ತಮ್ಮ ದಾಖಲೆಗಳನ್ನು ನೀಡಿ ಬಿ ಫಾರಂ ಸ್ವೀಕಾರಕ್ಕೆ ಕಾದು ಕುಳಿತಿದ್ದರು. ಹೈಕಮಾಂಡ್ನಿಂದ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗುವುದನ್ನು ಎದುರು ನೋಡಲಾಗುತ್ತಿತ್ತು.
ಕೊನೆ ಕ್ಷಣದ ಬದಲಾವಣೆ: ಆದರೆ, ಕೊನೆ ಕ್ಷಣದಲ್ಲಿ ಪಟ್ಟಿ ಬದಲಾವಣೆ ಮಾಡಿ ಬಿಡುಗಡೆ ಮಾಡಲಾಯಿತು. ಕೇಶವ ಪ್ರಸಾದ್, ಛಲವಾದಿ ನಾರಾಯಣಸ್ವಾಮಿ ಹೆಸರನ್ನು ಉಳಿಸಿಕೊಂಡು ಲಿಂಗರಾಜ್ ಪಾಟೀಲ್ ಬದಲು ಲಕ್ಷ್ಮಣ ಸವದಿ, ಮಂಜುಳಾ ಬದಲು ಹೇಮಲತಾ ನಾಯಕ್ ಹೆಸರನ್ನು ಪ್ರಕಟಿಸಲಾಯಿತು.
ತಾವೇ ಅಭ್ಯರ್ಥಿ ಎಂದು ಬಂದಿದ್ದ ಮಂಜುಳಾ ಮತ್ತು ಲಿಂಗರಾಜ್ ನಿರಾಶರಾಗಿ ಕಚೇರಿಯಿಂದ ನಿರ್ಗಮಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಲಿಂಗರಾಜ್ ಮತ್ತು ಮಂಜುಳಾ ಬಹಿರಂಗವಾಗಿ ತಮ್ಮ ಅಸಮಾಧಾನವನ್ನೂ ಹೊರಹಾಕಲು ಸಾಧ್ಯವಾಗದೇ ಪಕ್ಷದ ತೀರ್ಮಾನ ಸ್ವಾಗತಿಸುವ ಹೇಳಿಕೆ ನೀಡುತ್ತಾ ಕಚೇರಿಯಿಂದ ಹೊರನಡೆದರು.
ಇಲ್ಲಿ ಮಂಜುಳ ರೈತ ಮೋರ್ಚಾ ಉಪಾಧ್ಯಕ್ಷೆಯಾಗಿದ್ದು, ಯಡಿಯೂರಪ್ಪ ಬೆಂಬಲಿಗರಾಗಿದ್ದಾರೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಆರಂಭದಿಂದಲೂ ಮಂಜುಳಾ ಹೆಸರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ನಾಯಕರ ಮೂಲಕ ಕೋರ್ ಕಮಿಟಿ ಸಭೆಯಲ್ಲಿ ವಿರೋಧ ವ್ಯಕ್ತವಾಗುವಂತೆ ನೋಡಿಕೊಂಡಿದ್ದರು. ಆದರೂ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಮಂಜುಳಾ ಹೆಸರನ್ನು ಕೋರ್ ಕಮಿಟಿ ಶಿಫಾರಸು ಮಾಡಬೇಕಾಯಿತು.
ಇದರ ಜೊತೆ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಕೂಡ ಯಡಿಯೂರಪ್ಪ ಬೆಂಬಲಿಗರಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ವಿರುದ್ಧ ಮಾತನಾಡಿ, ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಹಾಗಾಗಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದರು.
ಸಂತೋಷ್ ಬೇಡಿಕೆಗೆ ಹೈಕಮಾಂಡ್ ಅಸ್ತು: ಇದರಲ್ಲಿ ಯತ್ನಾಳ್ ವಿರುದ್ಧ ಎನ್ನುವ ಕಾರಣಕ್ಕಿಂತ ಯಡಿಯೂರಪ್ಪ ಪರವಾದ ವರದಿ ನೀಡಿದ್ದರು ಎನ್ನುವ ಕಾರಣಕ್ಕೆ ಬಿ.ಎಲ್ ಸಂತೋಷ್ ವಿರೋಧ ಕಟ್ಟಿಕೊಂಡಿದ್ದರು. ಹಾಗಾಗಿ ಈ ಇಬ್ಬರ ಹೆಸರಿಗೆ ಸಂತೋಷ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಕೊನೆ ಕ್ಷಣದಲ್ಲಿ ಹೈಕಮಾಂಡ್ ಸಂತೋಷ್ ಬೇಡಿಕೆಗೆ ಮಣಿದು ಇಬ್ಬರ ಹೆಸರು ಕೈಬಿಟ್ಟು ತಮ್ಮ ಪರವಾಗಿರುವ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಮತ್ತು ಕಾರ್ಯದರ್ಶಿ ಹೇಮಲತಾ ನಾಯಕ್ಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ.
ಕುಟುಂಬ ರಾಜಕಾರಣದ ಉಲ್ಲೇಖ: ನಾಲ್ಕು ಸ್ಥಾನಗಳ ಆಯ್ಕೆಯಲ್ಲಿ ಸಂಪೂರ್ಣವಾಗಿ ಸಂತೋಷ್ ಹಿಡಿತ ಸಾಧಿಸಿದ್ದಾರೆ. ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರಗೆ ಟಿಕೆಟ್ ನೀಡದಂತೆ ತಡೆಯುವಲ್ಲಿ ಸಫಲವಾಗಿದ್ದ ಸಂತೋಷ್, ಪ್ರಧಾನಿ ಮೋದಿ ಕುಟುಂಬ ರಾಜಕಾರಣದ ವಿರುದ್ಧ ಮಾಡಿದ್ದ ಭಾಷಣ ಉಲ್ಲೇಖಿಸಿ ಪಟ್ಟಿಯಿಂದಲೇ ವಿಜಯೇಂದ್ರ ಹೆಸರು ಹೊರಗುಳಿಯುವಂತೆ ಮಾಡಿದ್ದರು. ಆರಂಭದಲ್ಲೇ ಅವರು ಮೇಲುಗೈ ಸಾಧಿಸಿದ್ದರು. ಇಂದು ಯಡಿಯೂರಪ್ಪ ಬೆಂಬಲಿತ ಇಬ್ಬರ ಹೆಸರನ್ನು ಪಟ್ಟಿಯಿಂದ ಕೈಬಿಡಿಸಿ ಹೊಸದಾಗಿ ಎರಡು ಹೆಸರನ್ನು ಸೇರಿಸುವ ಮೂಲಕ ಪಕ್ಷದಲ್ಲಿನ ತಮ್ಮ ಹಿಡಿತವನ್ನು ಸಂತೋಷ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಲಕ್ಷ್ಮಣ ಸವದಿ ಅವರನ್ನು ಯಡಿಯೂರಪ್ಪ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಮಾಡಲಾಗಿತ್ತು. ಬಿಎಸ್ವೈ ವಿರೋಧದ ನಡುವೆಯೂ ಸಂತೋಷ್ ಹೈಕಮಾಂಡ್ ಮೂಲಕ ಸವದಿಯನ್ನು ಬಿಎಸ್ವೈ ಸಂಪುಟದಲ್ಲಿ ಪ್ರತಿಷ್ಠಾಪಿಸಿದ್ದರು. ಆ ಮೂಲಕ ಸಂಪುಟದಲ್ಲಿ ತಮ್ಮ ಹಿಡಿತ ಹೊಂದುವಲ್ಲಿ ಸಫಲರಾಗಿದ್ದಾರೆ.
ಕಾರ್ಯದರ್ಶಿ ಕೇಶವ ಪ್ರಸಾದ್, ಯಡಿಯೂರಪ್ಪ ವಿರೋಧಿ ಪಾಳಯದವರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೇಶವ ಪ್ರಸಾದ್ ಅವರನ್ನು ಯಡಿಯೂರಪ್ಪ ಪಕ್ಷದಿಂದ ಹೊರಹಾಕಿಸಿದ್ದರು. ನಂತರ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಅವರು ಪಕ್ಷಕ್ಕೆ ಮರಳಿ ರಾಜ್ಯ ಕಾರ್ಯದರ್ಶಿ ಆಗಿದ್ದ ಬಿ.ಎಲ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷದಿಂದ ಉಚ್ಚಾಟನೆಗೊಂಡು ವಾಪಸ್ ಬಂದ ಕೇಶವ ಪ್ರಸಾದ್ ಹೆಸರು ಪಟ್ಟಿಯಲ್ಲಿ ಭದ್ರವಾಗಿ ಉಳಿಯಿತು ಎನ್ನಲಾಗಿದೆ.
ಯಾರಿವರು ಹೇಮಲತಾ ನಾಯಕ್: ಇನ್ನು ಹೇಮಲತಾ ನಾಯಕ್ ಕೂಡ ರಾಜ್ಯ ಕಾರ್ಯದರ್ಶಿ ಆಗಿದ್ದು, ಸಂಘಟನೆಯಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ವಿರೋಧಿ ಅಲ್ಲದೇ ಇದ್ದರೂ ಕಟೀಲ್ ತಂಡದಲ್ಲಿ ಸಕ್ರಿಯವಾಗಿದ್ದು ಸಂಘಟನೆಗೆ ನಿಷ್ಟರಾಗಿದ್ದಾರೆ. ಹಾಗಾಗಿ ಬಿಎಸ್ವೈ ಬೆಂಬಲಿತ ಮಂಜುಳಾ ಬದಲು ಮಹಿಳಾ ಕೋಟಾದಡಿ ಹೇಮಲತಾಗೆ ಅವಕಾಶ ಕೊಡಿಸುವ ಮೂಲಕ ಸಂತೋಷ್ ಇಡೀ ಆಯ್ಕೆ ಪ್ರಕ್ರಿಯೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಕೂಡ ಬಿಎಸ್ವೈ ಜೊತೆ ಮೊದಲಿನಷ್ಟು ಆತ್ಮೀಯತೆ ಉಳಿಸಿಕೊಂಡಿಲ್ಲ, ಪಕ್ಷದ ಜೊತೆ ಹೊಂದಿಕೊಂಡಿದ್ದಾರೆ. ಹಾಗಾಗಿ ಅವರ ಆಯ್ಕೆಗೆ ಸಂತೋಷ್ ಅಸ್ತು ಎಂದಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪುತ್ರನಿಗೂ ಅವಕಾಶವಿಲ್ಲ, ಬೆಂಬಲಿಗರಿಗೂ ಮಣೆ ಹಾಕಲಿಲ್ಲ ಎನ್ನುವ ಬೇಸರ ಇದೀಗ ಯಡಿಯೂರಪ್ಪ ಅವರನ್ನು ಕಾಡುತ್ತಿದ್ದು, ಸದ್ಯದ ಮಟ್ಟಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾದು ನೋಡಿ ಹೆಜ್ಜೆ ಇಡುವ ಯಡಿಯೂರಪ್ಪ ಈಗೇನು ಮಾಡಲಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು