ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಮನಾಫ್, ಮೊಹಮ್ಮದ್ ಸಾಹಿಲ್, ಫೈಜಲ್ ಹಾಗೂ ಮೊಹಮ್ಮದ್ ಫೈಜಲ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 20 ಲಕ್ಷಕ್ಕಿಂತ ಹೆಚ್ಚು ನಗದು ಹಣ, ಬ್ಯಾಂಕ್ ಖಾತೆಗೆ ವರ್ಗಾಯಿಸಿದ ನೂರಾರು ರಸೀದಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ತಿಂಗಳು 21ರಂದು ಜರಗನಹಳ್ಳಿ 6ನೇ ಹಂತದ 16ನೇ ಕ್ರಾಸ್ನಲ್ಲಿರುವ ಬ್ಯಾಂಕ್ ಆಫ್ ಎಟಿಎಂ ಬಳಿ ಆರೋಪಿ ಮೊಹಮ್ಮದ್ ಸಾಹಿಲ್ ಅನುಮಾನಸ್ಪಾದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬ್ಯಾಗ್ನಲ್ಲಿದ್ದ ಮಚ್ಚು ತೆಗೆದು ಸಾಯಿಸುವುದಾಗಿ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಸಂಬಂಧ ಪೊಲೀಸರಿಗೆ ಆ ವ್ಯಕ್ತಿ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ಮೊಹಮ್ಮದ್ ಸಾಯಿಲ್ನನ್ನು ಬಂಧಿಸಿ ತಪಾಸಣೆ ನಡೆಸಿದಾಗ ಅವನ ಬಳಿಯಿದ್ದ ಬ್ಯಾಗ್ನಲ್ಲಿ 1 ಲಕ್ಷ ರೂ. ನಗದು ಪತ್ತೆಯಾಗಿದೆ.
ಈತ ನೀಡಿದ ಸುಳಿವಿನ ಮೇರೆಗೆ ಕೋಣನುಕುಂಟೆ ಠಾಣಾ ವ್ಯಾಪ್ತಿಯಲ್ಲಿನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಬ್ಯಾಂಕ್ಗೆ ಠೇವಣಿ ಮಾಡಿದ್ದ ಹತ್ತು ಬಂಡಲ್ ರಸೀದಿಗಳು, 20 ಲಕ್ಷ ನಗದು ಸೇರಿದಂತೆ ಇನ್ನಿತರ ದಾಖಲೆಗಳು ಸಿಕ್ಕಿವೆ. ಈ ವೇಳೆ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
185 ಬ್ಯಾಂಕ್ ಅಕೌಂಟ್ನಿಂದ 31 ಕೋಟಿ ಠೇವಣಿ
ಆರೋಪಿಗಳೆಲ್ಲರೂ ಕೇರಳದ ಮೂಲದವರಾಗಿದ್ದು ಕಳೆದ 6 ತಿಂಗಳಿನಿಂದ ಅಕ್ರಮವಾಗಿ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದರು. ಹಣ ಅಕ್ರಮ ವರ್ಗಾವಣೆಗೆ ತಿಂಗಳಿಗೆ 60 ಸಾವಿರ ರೂಪಾಯಿ ಕಮೀಷನ್ ಪಡೆಯುತ್ತಿದ್ದರು. ಇದುವರೆಗೂ 2,656 ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಸದ್ಯ 185 ಬ್ಯಾಂಕ್ ಅಕೌಂಟ್ ಗಳಲ್ಲಿ 31 ಕೋಟಿ ರೂ.ಡೆಪಾಸಿಟ್ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ವಾಟ್ಸ್ಆ್ಯಪ್ ಮೂಲಕ ಡೆಪಾಸಿಟ್ ಮಾಡುವವರ ಹೆಸರು ರವಾನೆ
ವ್ಯವಸ್ಥಿತ ಜಾಲದಿಂದ ಹಣ ತರಿಸಿಕೊಳ್ಳುತ್ತಿದ್ದ ಆರೋಪಿಗಳು ನಾಪತ್ತೆಯಾಗಿರುವ ಪ್ರಮುಖ ಆರೋಪಿ ಹಣ ಠೇವಣಿ ಮಾಡುವವರ ಹೆಸರುಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತಿದ್ದ. ಈತನ ಸೂಚನೆಯ ಮೇರೆಗೆ ಆರೋಪಿಗಳೆಲ್ಲರೂ 25 ವಿವಿಧ ಬ್ಯಾಂಕ್ ಅಕೌಂಟ್ಗಳಿಗೆ ಪ್ರತಿ ತಿಂಗಳು 10 ರಿಂದ 50 ಸಾವಿರ ಹಣ ವರ್ಗಾವಣೆ ಮಾಡುತ್ತಿದ್ದರು.
ಬ್ಯಾಂಕ್ ಅಕೌಂಟ್ ಮಾಲೀಕರಿಗೂ ಹಣ ವರ್ಗಾವಣೆ ಮಾಹಿತಿಯಿಲ್ಲ!
ಆರೋಪಿಗಳು ಅಕ್ರಮವಾಗಿ ಹಣ ಡೆಪಾಸಿಟ್ ಮಾಡುವ ಬ್ಯಾಂಕ್ ಅಕೌಂಟ್ ಮಾಲೀಕರಿಗೂ ತಮ್ಮ ಖಾತೆಗೆ ಹಣ ಬಂದಿರುವ ಬಗ್ಗೆ ಮಾಹಿತಿಯಿಲ್ಲ. ಬಹುತೇಕ ಖಾತೆದಾರರಿಗೆ ಪೊಲೀಸರು ವಿಚಾರಿಸಿದಾಗ ಖಾತೆಯನ್ನು ಸಕ್ರಿಯವಾಗಿ ಬಳಸುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ. ಹಾಗಾದರೆ ಗ್ರಾಹಕರ ಅಕೌಂಟ್ ನಂಬರ್ಗಳು ಯಾರಿಂದ ಹೇಗೆ ಪಡೆಯುತ್ತಿದ್ದರು ಎಂಬುವುದು ಇನ್ನೂ ನಿಗೂಢವಾಗಿದ್ದು, ವಿಚಾರಣೆ ಬಳಿಕ ಮಾಹಿತಿ ತಿಳಿಯಲಿದೆ.
ಐಟಿ ಇಲಾಖೆಗೆ ಪತ್ರ ಬರೆದ ಪೊಲೀಸರು
ವ್ಯವಸ್ಥಿತವಾಗಿ ಹಲವು ತಿಂಗಳಿಂದ ಅಕ್ರಮ ಹಣ ವರ್ಗಾವಣೆ ಮೇಲ್ನೊಟಕ್ಕೆ ಸಾಬೀತಾಗಿದ್ದರಿಂದ ಹಣದ ಮೂಲದ ತನಿಖೆ ಬಗ್ಗೆಯೂ ಆದಾಯ ತೆರಿಗೆ ಅಧಿಕಾರಿಗಳಿಗೆ ಪುಟ್ಟೇನಹಳ್ಳಿ ಪೊಲೀಸರು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಕಾಮುಕ ಕಾನ್ಸ್ಟೇಬಲ್: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ!