ಬೆಂಗಳೂರು : ಬಿಜೆಪಿ ಅವಧಿಯಲ್ಲಿ ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಲಭಿಸಿದ್ದು, ಈ ಬಾರಿ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. ಬ್ರಾಹ್ಮಣ ಸಮಯದಾಯಕ್ಕೇ ಸಿಎಂ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ.
2008ರಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ರಚನೆಯಾದಾಗ ಲಿಂಗಾಯತ ಸಮುದಾಯದ ಯಡಿಯೂರಪ್ಪ ರಾಜ್ಯ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದರು. 2011ರಲ್ಲಿ ಬದಲಾದ ರಾಜಕೀಯ ವಿದ್ಯಮಾನಗಳಿಂದ ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಒಕ್ಕಲಿಗ ಸಮುದಾಯದ ಡಿ ವಿ ಸದಾನಂದಗೌಡ ಸಿಎಂ ಸ್ಥಾನ ಅಲಂಕರಿಸಿದ್ದರು. ಆದರೆ, ಒಂದು ವರ್ಷದಲ್ಲೇ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಸದಾನಂದಗೌಡರು ಕೂಡ ಅಧಿಕಾರ ಕಳೆದುಕೊಂಡರು. ನಂತರ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ಗೆ ಅವಕಾಶ ಸಿಕ್ಕಿತು.
ಬ್ರಾಹ್ಮಣ ಸಮುದಾಯಕ್ಕೆ ಸಿಎಂ ಭಾಗ್ಯ
2019ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಲಿಂಗಾಯತ ಸಮುದಾಯದಿಂದ ಯಡಿಯೂರಪ್ಪ ನಾಲ್ಕು ಬಾರಿ, ಶೆಟ್ಟರ್ ಒಂದು ಬಾರಿ ಸೇರಿ 5 ಬಾರಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಒಂದು ಬಾರಿ ಮುಖ್ಯಮಂತ್ರಿ ಹುದ್ದೆ ಲಭಿಸಿದೆ. ಈ ಸಲ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಚಿಂತನೆ ಪಕ್ಷದ ಹೈಕಮಾಂಡ್ ಮಟ್ಟದಲ್ಲೇ ನಡೆದಿದೆ ಎನ್ನಲಾಗಿದೆ.
ಹೈಕಮಾಂಡ್ ಮಟ್ಟದಲ್ಲೇ ಬ್ರಾಹ್ಮಣ ಮುಖ್ಯಮಂತ್ರಿ ಕುರಿತು ಚರ್ಚೆ
ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಆರಂಭಗೊಂಡಾಗಲೇ ಬ್ರಾಹ್ಮಣ ಮುಖ್ಯಮಂತ್ರಿ ಕುರಿತು ಚರ್ಚೆ ಆರಂಭಗೊಂಡಿತ್ತು. ಆಗಲೇ ಬ್ರಾಹ್ಮಣ ನಾಯಕರ ಹೆಸರುಗಳು ಕೇಳಿ ಬಂದಿತ್ತು. ಈಗ ಹುದ್ದೆ ಖಾಲಿಯಾಗಿದ್ದು, ಅವಕಾಶ ಕಲ್ಪಿಸುವ ವಿಷಯ ಮುನ್ನಲೆಗೆ ಬಂದಿದೆ. ಆರ್‌ಎಸ್‌ಎಸ್ ನಾಯಕರ ಸಮ್ಮತಿಯೂ ಇದಕ್ಕೆ ಇರುವ ಕಾರಣ ಹೈಕಮಾಂಡ್ ಬ್ರಾಹ್ಮಣ ಸಮುದಾಯಕ್ಕೆ ಸಿಎಂ ಪಟ್ಟ ನೀಡುವ ಕುರಿತು ಹೆಚ್ಚಿನ ಆಸಕ್ತಿವಹಿಸಿದೆ ಎನ್ನಲಾಗುತ್ತಿದೆ.
ಬಿ ಎಲ್ ಸಂತೋಷ್ ಸಿಎಂ ಆದರೂ ಅನುಮಾನವಿಲ್ಲ
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿಯೂ ಸಂತೋಷ್ ಹೆಸರು ಕೇಳಿ ಬಂದಿತ್ತು. ಆಗ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದ ಸಂತೋಷ್ಗೆ ಅವಕಾಶ ನೀಡಲು ಯಡಿಯೂರಪ್ಪ ಸಾರಾಸಗಟಾಗಿ ತಿರಸ್ಕರಿಸಿ ತಮ್ಮ ನಂಬುಗೆಯ ಸದಾನಂದಗೌಡರನ್ನು ಪಟ್ಟುಹಿಡಿದು ಮುಖ್ಯಮಂತ್ರಿ ಮಾಡಿದರು. ನಂತರ ಸದಾನಂದಗೌಡರನ್ನು ಇಳಿಸಿ ಶೆಟ್ಟರ್ ನೇಮಿಸುವಾಗಲೂ ಸಂತೋಷ್ ಹೆಸರು ಕೇಳಿ ಬಂದಿತ್ತು. ಆಗಲೂ ಅದಕ್ಕೆ ಯಡಿಯೂರಪ್ಪ ಅವಕಾಶ ನೀಡದೆ ಪಟ್ಟು ಸಾಧಿಸಿದ್ದರು.
ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಪಟ್ಟು ಹಿಡಿದು ಇಂತವರನ್ನೇ ಮುಖ್ಯಮಂತ್ರಿ ಮಾಡಿ ಎನ್ನುವ ಸ್ಥಿತಿ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಹಾಗಾಗಿ, ಈ ಬಾರಿ ಬಿ ಎಲ್ ಸಂತೋಷ್ಗೆ ಅವಕಾಶ ಸಿಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸಂತೋಷ್ ಹೆಸರೂ ಕೂಡ ಸಾಕಷ್ಟು ಚರ್ಚೆಯಲ್ಲಿದೆ.
ಸಿಎಂ ರೇಸ್ನಲ್ಲಿ ಪ್ರಲ್ಹಾದ್ ಜೋಶಿ
ಇನ್ನು, ಬ್ರಾಹ್ಮಣ ಸಮುದಾಯದವರೇ ಆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಸಿಎಂ ರೇಸ್ನಲ್ಲಿದ್ದಾರೆ. ಅವರ ಹೆಸರೂ ಸಾಕಷ್ಟು ಚರ್ಚೆಯಲ್ಲಿದೆ. ಅಲ್ಲದೆ ಬೆಂಗಳೂರಿಗೆ ಕುಟುಂಬ ಸಮೇತ ಬಂದು ನಂತರ ದೆಹಲಿಗೆ ನಿರ್ಗಮಿಸಿದ್ದಾರೆ. ಅವರು ಬೆಂಗಳೂರಿಗೆ ಯಾಕೆ ಬಂದರು, ಯಾಕೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು ಎನ್ನುವುದು ನಿಗೂಢವಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರೂ ಚಾಲ್ತಿ
ಹಿಂದೆ ಯಡಿಯೂರಪ್ಪ ಸರ್ಕಾರದ ವೇಳೆ ಸ್ಪೀಕರ್ ಆಗಿದ್ದ ಜಗದೀಶ್ ಶೆಟ್ಟರ್ ನಂತರ ಅದೇ ಅವಧಿಯ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಿದ್ದರು. ಆರ್‌ಎಸ್‌ಎಸ್ ಕಟ್ಟಾಳು ಹಾಗೂ ಪಕ್ಷ ಮತ್ತು ಸಂಘದ ನಿರ್ದೇಶನವನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಹಾಗಾಗಿ, ಅವರನ್ನು ಆಯ್ಕೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಯಡಿಯೂರಪ್ಪ ಯಾವುದೇ ಷರತ್ತು ಹಾಕದೆ, ಯಾವ ಸಮುದಾಯ ಅಥವಾ ನಾಯಕನ ಹೆಸರನ್ನು ಸೂಚಿಸದೇ ಇದ್ದಲ್ಲಿ ಎಲ್ಲವೂ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಈಗ ಎಲ್ಲರ ಚಿತ್ತ ಹೈಕಮಾಂಡ್‌ನತ್ತ ನೆಟ್ಟಿದೆ. ಯಾರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಿದ್ದಾರೆ. ಯಾವ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗುತ್ತೆ ಎನ್ನುವುದು ಸದ್ಯದ ಕುತೂಹಲ.