ಬೆಂಗಳೂರು: ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ನಾವು ಪಡೆಯಬೇಕಿಲ್ಲ, ಅದು ತಾನಾಗಿಯೇ ಬರಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನಂತರ ಮಾತನಾಡಿದ ಸಚಿವರು, ಬಿಬಿಎಂಪಿ ಮೇಯರ್ ಸ್ಥಾನವನ್ನು ಬಿಜೆಪಿ ಪಡೆಯುವಂತಹದ್ದು ಏನೂ ಇಲ್ಲ, ಅದು ತಾನೇ ತಾನಾಗಿ ಬರುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಹಾಗಾಗಿ ಕೊನೆ ವರ್ಷವಾದರೂ ಬಿಜೆಪಿಯವರ ಜೊತೆ ಸೇರಿಕೊಂಡು ಒಳ್ಳೆಯ ಕೆಲಸ ಮಾಡೋಣ ಎನ್ನುವುದು ಪಾಲಿಕೆ ಸದಸ್ಯರ ಮತ್ತು ಶಾಸಕರ ಅಭಿಪ್ರಾಯವಾಗಿದೆ. ವಿಪಕ್ಷದವರೂ ಕೂಡಾ ನೀವೇ ಮೇಯರ್ ಆಗಿ ಅಂತಾ ಹೇಳುವ ಸ್ಥಿತಿ ಇದೆ. ಸಿಎಂ ಯಡಿಯೂರಪ್ಪ ಅವರ ಕಾರ್ಯತತ್ಪರತೆಯಿಂದ ಮೇಯರ್ ಸ್ಥಾನ ತಾನಾಗಿಯೇ ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಮನೆಗೆ ಬರುತ್ತೇನೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದರು. ನಿನ್ನೆ ನಾನು ಇರಲಿಲ್ಲ, ಹಾಗಾಗಿ ಇಂದು ಕಟೀಲ್ ಅವರು ಬಂದಿದ್ದರು. ವಿಶೇಷ ಏನೂ ಇಲ್ಲ, ಇಂದು ಕಾರ್ಯಕರ್ತರು ಎಲ್ಲಾ ಸೇರಿ ಅಧ್ಯಕ್ಷರಿಗೆ ಅಭಿನಂದನೆ ಮಾಡಿದ್ದೇವೆ. ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಕೂಡ ಭೇಟಿ ಮಾಡುವುದಾಗಿ ತಿಳಿಸಿದ್ದರು, ಅವರೂ ಬಂದು ಹೋದರು ಎಂದರು.
ಇನ್ನು ಈ ಬಾರಿಯ ದಸರಾ ಸಿದ್ಧತೆ ತುಂಬಾ ಚೆನ್ನಾಗಿ, ಲವಲವಿಕೆಯಿಂದ ನಡೆಯುತ್ತಿದೆ. ಪಾರಂಪರಿಕ ಹಬ್ಬದ ಆಚರಣೆಗೆ ಪಕ್ಷಾತೀತವಾಗಿ ಎಲ್ಲಾ ಕೆಲಸ ಆರಂಭ ಮಾಡಿದ್ದೇವೆ ಎಂದರು.