ಬೆಂಗಳೂರು : ರಾಜ್ಯದಲ್ಲಿ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಯಾದ್ರೆ ಅದು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ತಪ್ಪೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣ ಹೇಳಿದರು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ನಂತರ ಮಾತನಾಡಿದ ಅಶ್ವತ್ಥ್ ನಾರಾಯಣ ಅವರು, ರಾಜ್ಯದಲ್ಲಿ ನಡೆಯುವ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಇರಲ್ಲ ಎಂಬ ಮಾತು ಸರಿಯಲ್ಲ.
ನಾವು ನಿರಂತರವಾಗಿ ಕನ್ನಡದಲ್ಲಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ಕೇವಲ ನವಂಬರ್ನಲ್ಲಿ ಮಾತ್ರ ಕನ್ನಡ ಕಾರ್ಯಕ್ರಮ ಮಾಡುವುದಿಲ್ಲ, ಕನ್ನಡಕ್ಕೆ ಉತ್ತೇಜನ ಕೊಡುವ ಕೆಲಸ ಆಗುತ್ತಿದೆ ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಆದ್ಯತೆ ನೀಡುವ ಮೂಲಕ ಕನ್ನಡ ಬೆಳೆಸುವ ಕೆಲಸ ಆಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ಮಾಡಲು 5 ಲಕ್ಷ ರೂ. ನೀಡಿದ್ದರು.
ನಾವು ಪಕ್ಷದ ಚಟುವಟಿಕೆಗಳನ್ನು ಕನ್ನಡದಲ್ಲೇ ಮಾಡುತ್ತೇವೆ. ಕರ ಪತ್ರ ಮುದ್ರಣ ಮಾಡುವ ಮೂಲಕ ಪ್ರತಿ ಕಾರ್ಯಕ್ರಮ ಕನ್ನಡದಲ್ಲಿ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ತೆಗೆದು ಹಿಂದಿ ಹೇರಿಕೆ ಮಾಡಲ್ಲ. ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮದಲ್ಲಿ ಚುನಾಯಿತ ಅಭ್ಯರ್ಥಿಗಳು ಗಮನ ಕೊಡಬೇಕು.
ಇಲ್ಲದಿದ್ದರೆ ಅದು ಚುನಾಯಿತ ಸ್ಥಳೀಯ ಅಭ್ಯರ್ಥಿಗಳ ತಪ್ಪೇ ಹೊರತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಪ್ಪಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.