ಬೆಂಗಳೂರು: ಕಾಂಗ್ರೆಸ್ ಪಕ್ಷ ಗಲಭೆ, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಹುನ್ನಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಟೀಲ್, ನಮ್ಮ ಗ್ರಾಮ ಸ್ವರಾಜ್ ಯಾತ್ರೆ ಯಶಸ್ವಿಯಾಗಿದೆ. ಇನ್ನು ಮೂರು ತಿಂಗಳಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಪ್ರತಿ ಜಿಲ್ಲೆಗಳಲ್ಲಿ ಒಂದೊಂದು ಸಮಾವೇಶ ಮಾಡಲಿದ್ದೇವೆ. ಇಂದಿನಿಂದಲೇ ಜಿಲ್ಲಾ ಪಂಚಾಯಿತಿ ಚುನಾವಣೆಗೂ ನಮ್ಮ ತಯಾರಿ ನಡೆಯಲಿದೆ. ಮುಂದಿನ 15 ದಿನಗಳು ನಮ್ಮ ಪಾಲಿಗೆ ಸವಾಲು. ಮನೆ-ಮನೆಗೆ ನಮ್ಮ ಯೋಜನೆಗಳನ್ನು ತಲುಪಿಸೋಣ ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಭೆ ಸೇರಿದ್ದೇವೆ. ಬಿಜೆಪಿ ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೇ.80 ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಗೆಲ್ಲಲಿದ್ದಾರೆ. 1,16,000 ಕಾರ್ಯಕರ್ತರಿಗೆ ನಾವು ಜವಾಬ್ದಾರಿ ಕೊಟ್ಟಿದ್ದೇವೆ ವಿರೋಧ ಪಕ್ಷಗಳೂ ಕೂಡ ನಮ್ಮ ಸಂಘಟನೆ ಕೆಲಸ ಮೆಚ್ಚಿಕೊಂಡಿವೆ ಎಂದರು.
ವಾತಾವರಣ ಬಹಳ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್ನ ಆಂತರಿಕೆ ಜಗಳಗಳು ಬಹಿರಂಗವಾಗುತ್ತಿವೆ. ರಾಜ್ಯದಲ್ಲಂತೂ ಪೂರ್ಣವಾದ ವ್ಯತ್ಯಾಸ ಕಾಣುತ್ತಿದೆ. ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ನವರೇ ಸೋಲಿಸಿದರು ಅಂತ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ. ಆ ಪಕ್ಷ ಆಂತರಿಕ ಜಗಳದಲ್ಲಿ ಬಿದ್ದಿದೆ. ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಬೇರೆ-ಬೇರೆ ತಂತ್ರ ಮಾಡುತ್ತಿದೆ. ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ ಗಲಭೆ ಮಾಡಿಸುತ್ತದೆ. ಈಗಲೂ ಬೆಂಕಿ ಹಾಕುವ ಕೆಲಸ ಮಾಡಿತ್ತು. ತಬ್ಲಿಘಿಗಳ ಬೆನ್ನಿಗೆ ನಿಂತು ಗಲಭೆ ಮಾಡಿಸಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೂಡ ಮಾಡಿಸಿತ್ತು. ಕಾಂಗ್ರೆಸ್ ಗಲಭೆ ಸೃಷ್ಟಿ ಮಾಡುತ್ತಾ ಮಾಡುತ್ತಾ ಸಂವಿಧಾನದ ಮೇಲೆ ಪ್ರಜಾಪ್ರಭುತ್ವದ ಮೇಲೂ ನಂಬಿಕೆ ಉಳಿಸಿಕೊಂಡಿಲ್ಲ. ಪರಿಷತ್ನಲ್ಲೂ ಕೂಡ ಗಲಭೆ ಗದ್ದಲ ಮಾಡಿಸಿದ್ದೆ ಕಾಂಗ್ರೆಸ್ ಪಕ್ಷ. ಹಾಗಾಗಿ ರಾಜ್ಯದ ಜನರ ಮುಂದೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದರು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ. ಸಿದ್ದರಾಮಯ್ಯ ಇದನ್ನೇ ನೆಪವಾಗಿಟ್ಟುಕೊಂಡು ಹಿಂದುಳಿದ ವರ್ಗ, ಕೊಡವ ಸಮುದಾಯಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗ ಕೊಡವ ಸಮುದಾಯದ ಮುಂದೆ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದರು.
ಕಾಂಗ್ರೆಸ್ ರೈತರ ಹೆಸರಲ್ಲಿ ಗಲಭೆ ರಾಜಕಾರಣ ಮಾಡುತ್ತಿದೆ. ರೈತರನ್ನು ರಕ್ಷಣೆ ಮಾಡಬೇಕಾದ ಕಾಂಗ್ರೆಸ್, ಅವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ರೈತರಿಗೆ ಪರವಾಗಿರುವ ಯೋಜನೆಗಳೇನು ಅನ್ನುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮನೆ-ಮನೆಗೆ ತಲುಪಿಸುವ ಕೆಲಸ ಆಗಬೇಕು. ವಾಜಪೇಯಿ ಜನ್ಮದಿನದ ಮುಂಚಿತವಾಗಿ ಎಲ್ಲ ಮನೆ-ಮನೆಗೆ ಕರಪತ್ರ ಹಂಚಬೇಕು. ವಾಜಪೇಯಿ ಜನ್ಮ ದಿನದಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸ ಮಾತನಾಡಲಿದ್ದಾರೆ. ಅದೇ ದಿನ ರೈತರ ಅಕೌಂಟ್ಗೆ ಎರಡು ಸಾವಿರ ರೂ. ಈ ವರ್ಷದ ಹಣ ನೇರವಾಗಿ ಜಮೆ ಆಗಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ಮೊದಲು ಪ್ರಧಾನಿಯನ್ನು ಸರ್ವಾಧಿಕಾರಿ ಅಂತ ಕರೆದರು. ಕಾಂಗ್ರೆಸ್, ಆರ್ಜೆಡಿ, ಡಿಎಂಕೆ, ಟಿಎಂಸಿ ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ.
ನಂತರ ಬಿಜೆಪಿಯನ್ನು ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಅಂತ ಅಪಪ್ರಚಾರ ಮಾಡಿದರು. ಅಂಬೇಡ್ಕರ್ ಜನ್ಮ ಸ್ಥಾನಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ. ಅಂಬೇಡ್ಕರನ್ನು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಿಡದವರು, ನಮ್ಮ ವಿರುದ್ದ ಆರೋಪ ಮಾಡಿದರು. ಇದೇ ಜನ ಬಿಜೆಪಿಯನ್ನು ರೈತ ವಿರೋಧಿ ಅಂತ ಬಿಂಬಿಸಲು ಹೊರಟಿದ್ದಾರೆ. ಆದರೆ ಸತ್ಯ ಬೇರೆಯೇ ಇದೆ, ಕಿಸಾನ್ ಸಮ್ಮಾನ್ ಬಿಜೆಪಿ ಯೋಜನೆ ನಮ್ಮ ಸರ್ಕಾರ ರೈತರ ಬದುಕಿನ ಸುಧಾರಣೆ ಪರ ಇದೆ. ಕೃಷಿ ಕ್ಷೇತ್ರದಲ್ಲಿ ಮಾರುಕಟ್ಟೆಯಲ್ಲಿ ಸುಧಾರಣೆ ಆಗಬೇಕು. ರೈತ ಎಲ್ಲೆಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾನೆ ಅನ್ನುವುದರ ಅಧ್ಯಯನ ಮಾಡಿಯೇ ಮಸೂದೆ ತಂದಿದ್ದೇವೆ. ರೈತ ಜಾಗರಣ ಅಭಿಯಾನ ಪ್ರಾರಂಭಿಸಿದ್ದೇವೆ. 25ನೇ ತಾರೀಖು 1 ಕೋಟಿಗೂ ಹೆಚ್ಚು ರೈತರನ್ನು ತಾಂತ್ರಿಕತೆಯ ಮೂಲಕ ಉದ್ದೇಶಿಸಿ ಮೋದಿ ಮಾತನಾಡ್ತಾರೆ. ಇದರಲ್ಲೂ ಉಳಿದ ಪಕ್ಷಗಳಿಗೆ ತಿರುಗು ಬಾಣವಾಗಲಿದೆ. ರೈತರು ದಲ್ಲಾಳಿಗಳ ಕಪಿ ಮುಷ್ಟಿಯಲ್ಲಿ ಇರಬೇಕು ಅನ್ನುವವರು ಮಸೂದೆ ವಿರೋಧಿಸುತ್ತಾರೆ ಎಂದರು.
ಮೂರು ಮಸೂದೆಗಳು ರೈತರ ಹಿತ ಕಾಪಾಡುತ್ತವೆ. ಆದರೂ ಅಪಪ್ರಚಾರ ನಡೆದಿದೆ. ಯಾರು ಅನುಮಾನದ ಬೀಜಗಳನ್ನು ಬಿತ್ತಿದ್ದರೋ ಅದಕ್ಕೆ ಪ್ರಧಾನಿಗಳೇ ಸಂಶಯ ನಿವಾರಣೆ ಮಾಡಿದ್ದಾರೆ. ಎಪಿಎಂಸಿ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಎಲ್ಲ 28 ಬೆಳೆಗಳಿಗೆ ಬೆಂಬಲ ನೀಡಿದ್ದು ನಮ್ಮ ಸರ್ಕಾರವೇ. ಎಪಿಎಂಸಿ ಜೊತೆ ಖಾಸಗಿ ಮಾರುಕಟ್ಟೆ ಇರುತ್ತದೆ. ಕಾಂಟ್ರಾಕ್ಟ್ ಫಾರ್ಮಿಂಗ್ ಅನ್ನೋದು ಬೆಳೆ ಮತ್ತು ಬೆಲೆ ನಡುವಿನ ಒಪ್ಪಂದ ಹೊರತು ಜಮೀನು ಖರೀದಿ ವಿಚಾರವಲ್ಲ. ಅವರಿಗೆ ಪ್ರಶ್ನಿಸುವ ಅಂಶಗಳು ಉಳಿದಿಲ್ಲ. ಅಸಹನೆಯ ಹೋರಾಟವನ್ನು ದೆಹಲಿಯಲ್ಲಿ ಮುಂದುವರಿಸಿದ್ದಾರೆ. ಹೋರಾಟದಲ್ಲಿ ಬಿಜೆಪಿ ಬಂಡವಾಳಶಾಹಿಗಳ ಪರ, ಅದಾನಿ ಅಂಬಾನಿಗೆ ಅನುಕೂಲ ಮಾಡ್ತಾರೆ ಎನ್ನುವುದೆಲ್ಲ ಅಪಪ್ರಚಾರ ಮಾತ್ರ. ಅದಾನಿ. ಅಂಬಾನಿ ಮಾತ್ರ ಖರೀದಿ ಮಾಡಬೇಕು ಅಂತ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿಗೆ ವೈಯಕ್ತಿಕ ಹಿತ ಇಲ್ಲ, ಕೇವಲ ದೇಶದ ಹಿತ ಮಾತ್ರ. ಆರೋಪ ಮಾಡುತ್ತಿರುವವರಿಗೆ ವೈಯಕ್ತಿಕ ಹಿತಾಸಕ್ತಿಗಳಿವೆ. ಕಾಯ್ದೆಗಳ ಬಗ್ಗೆ ಇದ್ದ ಅನುಮಾನಗಳನ್ನೆಲ್ಲ ನಾವು ಸುಧಾರಿಸಿದ್ದೇವೆ. ರೈತರ ಜೊತೆಗೆ ನಾವು ಚರ್ಚೆಗೆ ಮುಕ್ತವಾಗಿ ಸಿದ್ಧರಿದ್ದೇವೆ. ದಾರಿ ತಪ್ಪಿಸುವ ಕೆಲಸ ಮಾಡುವವರು, ಹೊಟ್ಟೆಯಲ್ಲಿ ಉರಿ ಇಟ್ಟುಕೊಂಡವರು ಮಾತ್ರ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ,ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶು ಅರವಿಂದ ಲಿಂಬಾವಳಿ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್ ರವಿಕುಮಾರ್, ಸಂಸದರಾದ ಪಿಸಿ ಮೋಹನ್ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ 32 ಮಂದಿ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.