ಬೆಂಗಳೂರು: 'ಶಾಸಕರ ಸಭೆಯಲ್ಲಿ ನಾನು ಭಾಗಿಯಾಗಿಲ್ಲ, ನನಗೇನೂ ಗೊತ್ತಿಲ್ಲ' ಎಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ಅವರ ನಿವಾಸದಲ್ಲೇ ಮುಖಂಡರು ಸೇರಿದ್ದ ಫೋಟೋ ಇದೀಗ ಬಹಿರಂಗಗೊಂಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎರಡು ದಿನದ ಹಿಂದೆ ನಡೆದಿದ್ದ ಅಸಮಾಧಾನಿತ ಶಾಸಕರ ಸಭೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ್ದ ಮುರುಗೇಶ್ ನಿರಾಣಿ, ''ನಾನು ಯಾವುದೇ ಸಭೆಯಲ್ಲಿ ಭಾಗಿಯಾಗಿಲ್ಲ, ಅದಕ್ಕೂ ನಮಗೂ ಸಂಬಂಧ ಇಲ್ಲ, ಯಾರನ್ನೂ ಸಂಪರ್ಕ ಮಾಡಿಲ್ಲ, ನಮಗೆ ಅಸಮಾಧಾನವೂ ಇಲ್ಲ'' ಎಂದಿದ್ದರು.
ಆದರೆ ಶಾಸಕರ ಸಭೆಗೂ ಮೊದಲು ಬಿಜೆಪಿ ನಾಯಕ ಮುರುಗೇಶ್ ನಿರಾಣಿ ನಿವಾಸದಲ್ಲಿಯೇ ಸಭೆ ನಡೆದಿದೆ. ಉಮೇಶ್ ಕತ್ತಿ ಹಾಗೂ ರಾಮದಾಸ್ ಜೊತೆ ನಿರಾಣಿ ಸಭೆ ನಡೆಸಿದ್ದರು ಎನ್ನಲಾಗಿದೆ. ಶಾಸಕರ ಭೋಜನಕೂಟಕ್ಕೂ ಮೊದಲು ಈ ಸಭೆ ನಡೆದಿದ್ದು, ಸಭೆಯ ಎಲ್ಲಾ ಮಾಹಿತಿ ನಿರಾಣಿಗೆ ಇತ್ತು ಎನ್ನುವ ಮಾತುಗಳು ಕೇಳಿಬಂದಿವೆ. ಉಮೇಶ್ ಕತ್ತಿ ಹಾಗೂ ನಿರಾಣಿ ಅವರ ಅಪಾರ್ಟ್‌ಮೆಂಟ್ ಒಂದೇ ಕಡೆ ಇರುವ ಕಾರಣಕ್ಕೆ ನಿರಾಣಿ ನಿವಾಸದಲ್ಲೇ ಸಭೆ ನಡೆಸಿ ನಂತರ ಕತ್ತಿ ನಿವಾಸದಲ್ಲಿ ಶಾಸಕರು ಸೇರಿಕೊಂಡಿದ್ದರು ಎನ್ನಲಾಗಿದೆ.
ಸದ್ಯಕ್ಕೆ ಉಮೇಶ್ ಕತ್ತಿ ಹಾಗೂ ರಾಮದಾಸ್ ಜೊತೆ ಮಾತುಕತೆ ನಡೆಸಿದ್ದನ್ನು ನಿರಾಣಿ ಒಪ್ಪಿಕೊಂಡಿದ್ದು, ''ಬಹಿರಂಗವಾಗಿರುವ ಫೋಟೋ ಸತ್ಯ, ನಾವು ಒಟ್ಟಿಗೆ ಸೇರಿದ್ದು ಕೊರೊನಾಗೂ ಮೊದಲು. ಎರಡು ತಿಂಗಳ ಹಿಂದೆ ರಾಮದಾಸ್ ನಮ್ಮ ಮನೆಗೆ ಬಂದಿದ್ದರು. ನಾನು, ಉಮೇಶ್ ಕತ್ತಿ ಆಗಾಗ ಊಟಕ್ಕೆ ಸೇರುತ್ತೇವೆ. ಒಮ್ಮೆ ರಾಮದಾಸ್ ಕೂಡಾ ಬಂದಿದ್ದರು, ಮೂವರೂ ಊಟ ಮಾಡಿದ್ದೆವು. ಆದರೆ ಇತ್ತೀಚೆಗೆ ಯಾವುದೇ ಸಭೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.