ಬೆಂಗಳೂರು : ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ಕೊಡುವ ಬಜೆಟ್‌ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇದು ದೇಶವನ್ನು ವಿಶ್ವವಂದ್ಯವನ್ನಾಗಿ ಪರಿವರ್ತಿಸುವಲ್ಲಿ ಪೂರಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಮೂಲಕ ಕೇಂದ್ರದ ಬಿಜೆಟ್ಗೆ ಪ್ರತಿಕ್ರಿಯೆ ನೀಡಿರುವ ಕಟೀಲ್, ಬೆಂಗಳೂರು ನಗರದಲ್ಲಿ ಮತ್ತೆರಡು ಮೆಟ್ರೊ ಮಾರ್ಗ (2ಎ ಮತ್ತು 2ಬಿ) ನಿರ್ಮಾಣಕ್ಕೆ 14,788 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಮಹತ್ವದ ಕ್ರಮವಾಗಿದೆ.
ನಗರದ ವಾಹನ ದಟ್ಟಣೆ ನಿವಾರಿಸುವಲ್ಲಿ ಮತ್ತು ಬೆಂಗಳೂರಿಗೆ ಇನ್ನಷ್ಟು ಕೈಗಾರಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಓದಿ: ಕೊರೊನಾ ಸಂಕಷ್ಟದಲ್ಲೂ ಜನಪರ ಬಜೆಟ್ : ಡಿಸಿಎಂ ಗೋವಿಂದ ಕಾರಜೋಳ
ಕೋವಿಡ್ ಸಂಬಂಧ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲು ದೂರದೃಷ್ಟಿಯ ಯೋಜನೆ, ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ವಿಶೇಷ ಯೋಜನೆ, ಆರೋಗ್ಯ ಕ್ಷೇತ್ರ ಬಲಪಡಿಸಲು 64,180 ಕೋಟಿ, 500 ಅಮೃತ್ ನಗರಗಳಲ್ಲಿ 2.86 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವುದು ಸೇರಿದಂತೆ ಇವೆಲ್ಲವೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆತ್ಮನಿರ್ಭರ ಭಾರತ ಮತ್ತು ವೈಯಕ್ತಿಕ ಸ್ವಾವಲಂಬನೆ ನಿಟ್ಟಿನಲ್ಲಿ ಈ ಬಜೆಟ್ ಮಹತ್ವದ ಹೆಜ್ಜೆಯಾಗಿದೆ. ಮುಂದಿನ 10 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಈ ಬಜೆಟ್ ಪೂರಕವಾಗಲಿದೆ.
ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ.