ಬೆಂಗಳೂರು: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಕಮಲ ಪಕ್ಷದಿಂದ ಮಂಗಳಾ ಅಂಗಡಿ ಅಭ್ಯರ್ಥಿಯಾಗಿ ಕಣದಲ್ಲಿದ್ದು ಅನುಕಂಪದ ಅಲೆಯ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ ಪಕ್ಷ ಅಳೆದು - ತೂಗಿ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದೆ.
ಇದುವರೆಗೂ ಪಕ್ಷಕ್ಕೆ ಗೆಲುವಿನ ಆಶಯ ಮಾತ್ರ ಇತ್ತು. ಆದರೆ, ಕಡೆ ಕ್ಷಣದವರೆಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಕೆಲ ಬಿಜೆಪಿ ಮುಖಂಡರು ಪ್ರಚಾರಕ್ಕಿಳಿಯದ ಹಿನ್ನೆಲೆ ಗೆಲುವಿನ ಸಾಧ್ಯತೆಯನ್ನು ಸಹ ಕಾಂಗ್ರೆಸ್ ನಿರೀಕ್ಷಿಸುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಸಾಂಗಿಕ ಪ್ರಚಾರ, ಬಿಜೆಪಿಯ ಸ್ಥಳೀಯ ನಾಯಕರ ಪ್ರಚಾರ ನಿರಾಸಕ್ತಿ, ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರು ಪ್ರಚಾರದಲ್ಲಿ ಭಾಗಿಯಾಗದೇ ಇರುವುದು, ಬಿಸಿಲಿನ ಬೇಗೆಯ ಹಿನ್ನೆಲೆ ಸಾಕಷ್ಟು ನಾಯಕರು ತಮ್ಮ ಪ್ರಚಾರವನ್ನು ಮೊಟಕುಗೊಳಿಸುವುದು ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಿ ಲಭಿಸಿದೆ ಎಂಬ ಮಾತು ಕೇಳಿಬರುತ್ತಿದೆ.
ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಕಡೆಯ ಕ್ಷಣಗಳಲ್ಲಿ ಲಭಿಸಿದ ಅನುಕೂಲಗಳನ್ನು ಗಮನಿಸಿದರೆ ಬಿಜೆಪಿಯ ಅನುಕಂಪದ ಅಲೆಯನ್ನು ಮೀರಿ ಕಾಂಗ್ರೆಸ್ಸಿಗೆ ಗೆಲುವಿನ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಬಿಜೆಪಿ ಟಿಕೆಟ್ ಪಡೆಯಲು ಕನಿಷ್ಠ 35 ಮಂದಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಅಂಗಡಿ ಕುಟುಂಬದಲ್ಲಿಯೇ ಒಬ್ಬರಿಗೆ ಟಿಕೆಟ್ ಕೊಡಲು ತೀರ್ಮಾನಿಸಿ ಮಂಗಳಾ ಅಂಗಡಿ ಕಣಕ್ಕಿಳಿದ ಮೇಲೆ ಈ ಪೈಕಿ 4 ರಿಂದ 5 ಜನರನ್ನು ಹೊರತುಪಡಿಸಿ ಉಳಿದವರು ಪ್ರಚಾರ ಅಖಾಡಕ್ಕೆ ಇಳಿದಿಲ್ಲ.
ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಕೆಲವರು ತೋರಿಕೆಗೆ ಮುಖ ತೋರಿಸಿದ್ದಾರೆಯೇ ಹೊರತು ಮನಸ್ಸಿಟ್ಟು ಪ್ರಚಾರಕಾರ್ಯಕ್ಕೆ ಆಗಮಿಸಲಿಲ್ಲ. ಒಂದೆಡೆ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಬಿಜೆಪಿಯಲ್ಲಿರುವ ಇವರ ಸೋದರರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರವಾದ ಅರಭಾವಿ ಹಾಗೂ ಗೋಕಾಕ್ ನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಲ್ಲ.
ಬಾಲಚಂದ್ರ ಜಾರಕಿಹೊಳಿ ಒಂದು ದಿನ ತೋರಿಕೆಗೆ ತೆರಳಿ ಪ್ರಚಾರ ಮಾಡಿದ್ದರೆ, ರಮೇಶ್ ಜಾರಕಿಹೊಳಿ ಕ್ಷೇತ್ರದತ್ತ ಮುಖವೇ ಹಾಕಿಲ್ಲ. ಪ್ರಚಾರಕ್ಕೆ ತೆರಳಿದ್ದರು ಜಿಲ್ಲೆಯ ಮುಖಂಡರ ಜೊತೆ ಚರ್ಚಿಸುವ ಮೂಲಕವಾದರೂ ಹುರಿದುಂಬಿಸುವ ಕಾರ್ಯವನ್ನು ಈ ನಾಯಕರು ಮಾಡಿಲ್ಲ. ಇದೆಲ್ಲವೂ ಕಾಂಗ್ರೆಸ್ ಪಾಲಿಗೆ ವರದಾನವಾಗಿದೆ. 2 ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಸದಸ್ಯರಿದ್ದರು ಮತ ಸೆಳೆಯುವ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಬಿಜೆಪಿಗೆ ಇದೆ. ಕಾಂಗ್ರೆಸ್ ಪಕ್ಷ ಈ ಅನುಕೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಕಾರ್ಯತಂತ್ರ ಹೆಣೆದಿದೆ.
ಕೇಂದ್ರೀಕೃತ ಒಲವು ಅಪಾಯ
ರಾಜ್ಯ ಬಿಜೆಪಿ ನಾಯಕರು ಮತದಾರರನ್ನು ಸೆಳೆಯುವ ವಿಚಾರದಲ್ಲಿಯೂ ಒಂದೇ ಕಡೆ ಕೇಂದ್ರೀಕೃತವಾಗಿದ್ದು ಸಹ ಕಾಂಗ್ರೆಸ್ಸಿಗೆ ಅನುಕೂಲವಾಗಿ ಲಭಿಸಿದೆ. ಅನುಕಂಪದ ಅಲೆಯಲ್ಲಿ ಲಿಂಗಾಯತ ಸಮುದಾಯದ ಮತಗಳನ್ನು ಪಡೆದರೆ ಸಾಕು ಎಂಬ ಬಿಜೆಪಿಯ ನಿಲುವು ಇತರ ಸಮುದಾಯಗಳ ಕಾಂಗ್ರೆಸ್ ದೃಷ್ಟಿ ಹರಿಸಲು ಹಾಗೂ ಮತದಾರರನ್ನು ಸೆಳೆಯಲು ಅನುಕೂಲ ಮಾಡಿಕೊಟ್ಟಿದೆ. ಬಿಜೆಪಿಗೆ ಎದುರಾಗಿರುವ ದೊಡ್ಡ ಆತಂಕ ಅಶೋಕ್ ಪೂಜಾರಿ. ಸದಾ ರಮೇಶ್ ಜಾರಕಿ ಹೊಳಿ ಜೊತೆ ಇರುತ್ತಿದ್ದ ಪೂಜಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮರಾಠಿ ಭಾಷೆಗಳನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಹೀಗಾಗಿ ಬಹುಸಂಖ್ಯೆಯಲ್ಲಿರುವ ಈ ಮತದಾರರು ಕಾಂಗ್ರೆಸ್ ನತ್ತ ಮುಖ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಉಸ್ತುವಾರಿ ಸಮಸ್ಯೆ
ಈ ಬಾರಿ ಚುನಾವಣೆಗೆ ಸಚಿವ ಜಗದೀಶ್ ಶೆಟ್ಟರ್ ಉಸ್ತುವಾರಿಯಾಗಿದ್ದಾರೆ. ಇದು ಸಹ ಕಾಂಗ್ರೆಸ್ಗೆ ಅನುಕೂಲವಾಗಿ ಲಭಿಸಿದೆ. ಬೆಳಗಾವಿ ರಾಜಕೀಯವನ್ನು ಸಮರ್ಥವಾಗಿ ಶೆಟ್ಟರ್ ಅರಗಿಸಿಕೊಂಡಿಲ್ಲ. ಹುಬ್ಬಳ್ಳಿ - ಧಾರವಾಡ ರಾಜಕಾರಣಕ್ಕಿಂತ ಇದು ಭಿನ್ನವಾಗಿದೆ ಎನ್ನುವುದು ನಿರಂತರವಾಗಿ ಪ್ರಚಾರದಲ್ಲಿ ತೊಡಗಿರುವ ಸಂದರ್ಭ ಅರಿವಾಗಿದೆ. ಬಿಜೆಪಿ ಪಕ್ಷಕ್ಕೆ ಇದು ತಡವಾಗಿ ಪರವಾಗಿರುವ ಹಿನ್ನೆಲೆ ಉಸ್ತುವಾರಿ ಆಯ್ಕೆ ಕೂಡ ಬಿಜೆಪಿಗೆ ಮುಳುವಾಗಿದೆ.
ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯ ಮತದಾರರು ಲಿಂಗಾಯಿತರಾಗಿದ್ದಾರೆ. ಇವರ ಸಂಖ್ಯೆ ಬರೋಬ್ಬರಿ ಏಳು ಲಕ್ಷ ಇದೆ. ಆದರೆ, ಬಿಜೆಪಿ ಇವರನ್ನ ಸೆಳೆಯುವ ಪ್ರಯತ್ನದಲ್ಲಿ ಇತರ ವರ್ಗದ 11 ಲಕ್ಷ ಮಂದಿ ಮತದಾರರನ್ನು ಮರೆತಿದೆ. ಇವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದು ಇದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ನಡೆಯಾಗಿ ದೊರಕಲಿದೆ ಎಂಬ ಮಾತು ಕೇಳಿಬರುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ಆಡಳಿತ ನೀಡುತ್ತಿವೆ. ಬೆಲೆ ಏರಿಕೆಯಿಂದಾಗಿ ಜನರಿಗೆ ಸಂಕಷ್ಟ ಎದುರಾಗಿದೆ ಎಂಬ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿದೆ. ಇದು ಕೂಡ ಮತದಾರರನ್ನು ಪ್ರಭಾವಿಸುತ್ತಿದೆ ಎಂಬ ಮಾಹಿತಿ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 7 ಲಕ್ಷ ಮತ ಪಡೆದ ಸುರೇಶ್ ಅಂಗಡಿ 4 ಲಕ್ಷ ಮತಗಳ ದೊಡ್ಡ ಅಂತರದಿಂದ ಗೆದ್ದಿದ್ದರು. ಆದರೆ, ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದ್ದು, ಗೆಲ್ಲಲು ಬಿಜೆಪಿ ಹೆಣಗಾಟ ನಡೆಸಬೇಕಾಗಿ ಬಂದಿದೆ. ಕಡೆಯ ಕ್ಷಣಗಳ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ಸಹ ತಾನು ಗೆಲ್ಲುತ್ತೇನೆ ಎಂದು ವಿಶ್ವಾಸದಿಂದ ಹೇಳಿಕೊಂಡು ಬೀಗುತ್ತಿದೆ. ಮತದಾರರ ತೀರ್ಮಾನ ಇನ್ನೆರಡು ದಿನಗಳಲ್ಲಿ ಮತಪೆಟ್ಟಿಗೆ ಸೇರಲಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ.. ಲಸಿಕೆ ಮತ್ತು ಹೋಮಿಯೋಪತಿ ನೋಸೋಡ್ಗಳ ವ್ಯತ್ಯಾಸಗಳೇನು..?