ಬೆಂಗಳೂರು: ಮೇಕೆದಾಟು ಯೋಜನೆ ವಿಷಯದಲ್ಲಿ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ, ನಮ್ಮ ಪಾಲಿನ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಾನು ಸಹಕಾರ ಕೊಡುತ್ತೇನೆ ಎಂದು ಸಿ ಟಿ ರವಿ ತಿಳಿಸಿದ್ದಾರೆ.
ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನದಿ ನೀರಿನ ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ತಮಿಳುನಾಡು ತಮ್ಮ-ತಮ್ಮ ಪಾಲಿನ ನೀರು ಬಳಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ, ತೀರ್ಪನ್ನು ಮೀರಿದರೆ ಮಾತ್ರ ವಿರೋಧ ವ್ಯಕ್ತವಾಗಲಿದೆ. ಕರ್ನಾಟಕ ತೀರ್ಪಿನ ಒಳಗೆ ಯೋಜನೆ ರೂಪಿಸಿದರೆ ಯಾವುದೇ ರೀತಿಯ ಅಡ್ಡಿಯೂ ಬರುವುದಿಲ್ಲ ಇದೇ ಮಾತನ್ನು ತಮಿಳುನಾಡಿನ ನೆಲದಲ್ಲಿಯೂ ಹೇಳಿದ್ದೇನೆ ಇಲ್ಲಿಯೂ ಹೇಳುತ್ತಿದ್ದೇನೆ ಎಂದ್ರು.
ರಾಜಕೀಯ ದೃಷ್ಟಿಯಿಂದ ಈ ಯೋಜನೆಯನ್ನು ಯಾವ ಪಕ್ಷವು ದುರ್ಬಳಕೆ ಮಾಡಿಕೊಳ್ಳಬಾರದು ವಾಸ್ತವಿಕ ನೆಲೆಯಲ್ಲಿ ಯೋಜನೆಯನ್ನ ನೋಡಬೇಕಿದೆ. ಎರಡು ರಾಜ್ಯಗಳ ನಡುವಿನ ಕುಡಿಯುವ ನೀರಿನ ಹಂಚಿಕೆ ವಿಷಯ ಇದು. ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚನೆ ಮಾಡಬೇಕು ಎಮೋಷನಲ್ ಆಗಿ ಎರಡು ರಾಜ್ಯದ ನಡುವೆ ಸಂಘರ್ಷದ ರೀತಿಯಲ್ಲಿ ನೋಡಬಾರದು ಎಂದರು.
ಬೆಂಗಳೂರಿನಲ್ಲಿನ ತಮಿಳರಿಗೆ ನಾವು ಕುಡಿಯುವ ನೀರು ಕೊಡಲ್ಲ ಎನ್ನಲು ಸಾಧ್ಯವೇ?:
ಕುಡಿಯುವ ನೀರಿಗೆ ಗಡಿ ಇಲ್ಲ ಹಾಗೆಯೇ ರಾಜಕಾರಣ ಕೂಡ ಇರಬಾರದು. ಇದನ್ನು ಜಗಳದ ರೀತಿಯಲ್ಲಿ ಪರಿಹರಿಸಲು ಸಾಧ್ಯವಿಲ್ಲ ವಾಸ್ತವಿಕ ರೀತಿಯಲ್ಲಿ ಪರಿಹರಿಸಬೇಕು. ಬೆಂಗಳೂರಿನಲ್ಲಿರುವ ತಮಿಳುನಾಡಿನವರಿಗೆ ಕುಡಿಯುವ ನೀರು ಕೊಡಲು ಸಾಧ್ಯವಿಲ್ಲ ಎನ್ನಲು ಸಾಧ್ಯವೇ? ಅವರಿಗೂ ನೀರು ಕೊಡಬೇಕಿದೆ.
ಈ ನೆಲೆಗಟ್ಟಿನಲ್ಲಿಯೇ ಎಲ್ಲರೂ ಯೋಚಿಸಬೇಕು ಹಾಗಾಗಿ ನನ್ನ ನಿಲುವು ಭಾರತ ಕೇಂದ್ರಿತವಾದ ನಿಲುವು. ಕರ್ನಾಟಕ ನ್ಯಾಯದ ಪರವಾಗಿದ್ದಾಗ ನಾನು ಕೂಡ ನ್ಯಾಯದ ಪರವಾಗಿಯೇ ಮಾತನಾಡುತ್ತೇನೆ ಎಂದರು.
ಬಿಜೆಪಿ ಸೌಹಾರ್ದಯುತ ರಾಜಕಾರಣದ ಮೇಲೆ ನಂಬಿಕೆ ಇರಿಸಿಕೊಂಡಿದೆ. ಹಾಗಾಗಿಯೇ 25 ವರ್ಷಗಳಿಂದ ವಿವಾದದ ಕೇಂದ್ರವಾಗಿ ಮಾಡಿ ತಿರುವಳ್ಳುವರ್ ಪ್ರತಿಮೆಯನ್ನು ಗೋಣಿ ಚೀಲದಲ್ಲಿ ಮುಚ್ಚಿಡಲಾಗಿತ್ತು. ಆದರೆ, ನಾವು ಬೆಂಗಳೂರಿನಲ್ಲಿ ತಿರುವಳ್ಳುವರ್ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡಿದೆವು. ಎರಡು ರಾಜ್ಯಗಳ ನಡುವೆ ಸೌಹಾರ್ದಯುತ ರಾಜಕಾರಣ ಮಾಡಿದೆವು.
ನೀರಿನ ಹಂಚಿಕೆ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣ ಮಾಡಲು ಅವಕಾಶವಿಲ್ಲ. ನಮ್ಮ ಪಾಲಿನ ವ್ಯಾಪ್ತಿಯಲ್ಲಿ ನೀರಿನ ಯೋಜನೆಯನ್ನು ಬಳಸಿಕೊಳ್ಳಲು ಏನು ಮಾಡಬೇಕು ಅದನ್ನು ಕರ್ನಾಟಕ ಸರ್ಕಾರ ಮಾಡಲಿದೆ ಎಂದರು.