ಬೆಂಗಳೂರು: ಕೋವಿಡ್-19 ವಿರುದ್ಧ ಹೋರಾಟಕ್ಕೆ ಸಾತ್ ನೀಡಲು ಬಿಜೆಪಿಯ ಎಲ್ಲಾ ಶಾಸಕರು ಹಾಗೂ ಸಂಸದರು ತಮ್ಮ ಒಂದು ತಿಂಗಳ ವೇತನವನ್ನು ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 127 ಬಿಜೆಪಿ ಶಾಸಕರಿದ್ದು, 26 ವಿಧಾನ ಪರಿಷತ್ ಸದಸ್ಯರಿದ್ದಾರೆ. ಎಲ್ಲರೂ ತಮ್ಮ ಒಂದು ತಿಂಗಳ ವೇತನವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಲು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತಿದ್ದಾರೆ. ಮೂಲ ವೇತನ 25 ಸಾವಿರದೊಂದಿಗೆ ಎಲ್ಲಾ ಭತ್ಯೆಗಳನ್ನು ಸೇರಿ ಶಾಸಕರಿಗೆ ಪ್ರತಿ ತಿಂಗಳು 1.25 ಲಕ್ಷ ರೂ.ಗಳು ವೇತನ ರೂಪದಲ್ಲಿ ಬರುತ್ತೆ. ಈ ಹಣವನ್ನು ಇದೀಗ ತುರ್ತು ಪರಿಹಾರ ನಿಧಿಗೆ ನೀಡಲಿದ್ದಾರೆ.
ಇವರೊಂದಿಗೆ ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದು, ನಾಲ್ವರು ರಾಜ್ಯಸಭಾ ಸದಸ್ಯರಿದ್ದಾರೆ. ಎಲ್ಲಾ ಭತ್ಯ ಸೇರಿ ಸಂಸದರಿಗೆ ತಿಂಗಳಿಗೆ 2.7 ಲಕ್ಷ ರೂ.ಗಳ ವೇತನ ಬರಲಿದ್ದು, ಸಂಸದರೂ ಕೂಡ ತಮ್ಮ ಒಂದು ತಿಂಗಳ ವೇತನವನ್ನು ಪ್ರಧಾನಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಕೊಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ದೇಶದ ಎಲ್ಲಾ ಬಿಜೆಪಿ ಶಾಸಕರು, ಸಂಸದರು ತಮ್ಮ ಒಂದು ತಿಂಗಳ ವೇತನವನ್ನು ಕೇಂದ್ರ ಪರಿಹಾರ ನಿಧಿಗೆ ನೀಡುವಂತೆ ಸೂಚನೆ ನೀಡಿದ್ದು, ಅದರಂತೆ ರಾಜ್ಯದ ಶಾಸಕರು ಮತ್ತು ಸಂಸದರಿಗೆ ತಮ್ಮ ಒಂದು ತಿಂಗಳ ವೇತನ ಪರಿಹಾರ ನಿಧಿಗೆ ನೀಡುವಂತೆ ರಾಜ್ಯ ಘಟಕದಿಂದ ತಿಳಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿಯೂ ಬಿಜೆಪಿಯದ್ದೇ ಸರ್ಕಾರವಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಿಜೆಪಿ ಜನಪ್ರತಿನಿಧಿಗಳು ಯಾವ ರೀತಿ ಸಹಕಾರ ನೀಡಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಮೊದಲ ಹಂತವಾಗಿ ಕೇಂದ್ರ ಪರಿಹಾರ ನಿಧಿಗೆ ತಿಂಗಳ ವೇತನ ನೀಡುತ್ತಿದ್ದು, ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಅನುದಾನ ಬಳಕೆಗೆ ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲು ಮುಂದಾಗಬಹುದು ಎನ್ನಲಾಗ್ತಿದೆ.