ಬೆಂಗಳೂರು: 'ರಾಜ್ಯದಲ್ಲಿ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ನನ್ನ ತಾಯಿಯನ್ನೂ ಕೂಡಾ ಮತಾಂತರ ಮಾಡಿದ್ದಾರೆ' ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ಹೇಳಿಕೊಂಡರು. ಶೂನ್ಯವೇಳೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
'ಕ್ರಿಶ್ಚಿಯನ್ ಮಿಷನರಿಗಳು ಅಮಾಯಕರನ್ನು ಬ್ರೈನ್ ವಾಶ್ ಮಾಡುತ್ತಾರೆ'
'ರಾಜ್ಯದಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ. ನನ್ನ ಕ್ಷೇತ್ರದಲ್ಲಿ 10,000-20,000 ಜನರ ಮತಾಂತರ ಆಗಿದೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಅಮಾಯಕರನ್ನು ಕರೆದೊಯ್ದು ಬ್ರೈನ್ ವಾಶ್ ಮಾಡಿಸುತ್ತಾರೆ. ನನ್ನ ತಾಯಿಯನ್ನು ಹಾಗೇ ಮಾಡಿದ್ದಾರೆ. ನನ್ನ ತಾಯಿ ಮೊಬೈಲ್ ರಿಂಗ್ ಟೋನ್‌ಗೆ ಕ್ರಿಶ್ಚಿಯನ್ ಪದ ಹಾಕುತ್ತಾರೆ. ನಮ್ಮ ಮನೆಯಲ್ಲಿ ಪೂಜೆ ಮಾಡಲು ಆಗುತ್ತಿಲ್ಲ. ಇದರಿಂದ ಮುಜುಗರ ಆಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸದನದಲ್ಲಿ ಸದ್ದು ಮಾಡಿದ ಮತಾಂತರ ವಿಷಯ.. ಕಡಿವಾಣಕ್ಕೆ ಕಠಿಣ ಕಾನೂನು ತರಲು ಸರ್ಕಾರದ ಚಿಂತನೆ
'ಮತಾಂತರಕ್ಕೂ ಮುನ್ನ ಎಸ್‌ಸಿ,ಎಸ್‌ಟಿ ಮೀಸಲಾತಿ ಬಿಟ್ಟು ಕೊಡಲಿ'
ದಲಿತರು, ಹಿಂದುಳಿದ ವರ್ಗ, ಮುಸ್ಲಿಮರನ್ನೂ ಮತಾಂತರ ಮಾಡಲಾಗುತ್ತಿದೆ. ಇದೊಂದು ದೊಡ್ಡ ಪಿಡುಗು. ಚರ್ಚ್ನವರು ಸುಳ್ಳು ರೇಪ್ ಕೇಸ್, ದೌರ್ಜನ್ಯ ಕೇಸ್ ಹಾಕುತ್ತಾರೆ. ಯಾರೂ ಬೇಕಾದರೂ ಮತಾಂತರ ಆಗಿ ಹೋಗಲಿ. ಆದರೆ ಹೋಗುವ ವೇಳೆ ಎಸ್‌ಸಿ, ಎಸ್ಟಿಯವರಿಗೆ ಸಿಗುವ ಮೀಸಲಾತಿ ಹಕ್ಕನ್ನು ಬಿಟ್ಟು ಕೊಟ್ಟು ಹೋಗಲಿ. ಈ ಸಂಬಂಧ ಕಠಿಣ ಕಾನೂನು ಕ್ರಮ ತರಬೇಕು ಎಂದು ಆಗ್ರಹಿಸಿದರು.