ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಬಿಜೆಪಿಯು ಅನರ್ಹರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡು ಇಂದು ಉಪಚುನಾವಣೆಯ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸುವ ಸಾಧ್ಯತೆ ಇದೆ.
15 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ಉಳಿದಿರುವ 7 ಕ್ಷೇತ್ರಗಳ ಆಯ್ಕೆಯ ಬಗ್ಗೆ ಹಿರಿಯ ನಾಯಕರ ಸಭೆ ನಡೆಸಿ ಬಳಿಕ ತೀರ್ಮಾನ ತೆಗೆದುಕೊಳ್ಳಲಿದೆ.
ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಸಿದ್ಧ ಮಾಡಿಕೊಂಡಿದೆ. ಅನರ್ಹ ಶಾಸಕರು ಗುರುವಾರ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡು ಈ ಬಳಿಕ ಒಂದು ಸುತ್ತಿನ ಸಭೆ ನಡೆಸಿ, ಅಭ್ಯರ್ಥಿಗಳ ಹೆಸರುಗಳನ್ನು ಬಹಿರಂಗ ಪಡಿಸುವುದಷ್ಟು ಬಾಕಿ ಇದೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ನೇಮಕ ಮಾಡಿ, ಚುನಾವಣಾ ಅಖಾಡಕ್ಕೆ ಸನ್ನದ್ಧವಾಗಿದೆ. ಚುನಾವಣೆ ಮುಗಿಯುವವರೆಗೂ ಉಸ್ತುವಾರಿಗಳು ಕ್ಷೇತ್ರದಲ್ಲಿದ್ದು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯ ಪ್ರಚಾರ ಕಾರ್ಯ ಆರಂಭಗೊಳ್ಳಲಿದೆ. ಹೀಗಾಗಿ, ಇಂದು ಅಭ್ಯರ್ಥಿಗಳ ಪಟ್ಟಿ ಹೊರ ಬೀಳುವುದನ್ನು ತಳಿಹಾಕುವಂತಿಲ್ಲ.
ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು, ಕಮಲ ಚಿನ್ಹೆಯಡಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಟಿಕೆಟ್ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಉಪಚುನಾವಣೆ ನಡೆಯುವ 15 ವಿಧಾನಸಭಾ ಕ್ಷೇತ್ರಗಳು:
ಹಿರೇಕೆರೂರು, ರಾಣೆಬೆನ್ನೂರು, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್. ಪುರ, ಮಹಾಲಕ್ಷ್ಮೀ ಲೇಔಟ್, ಹುಣಸೂರು, ಯಲ್ಲಾಪುರ, ಯಶವಂತಪುರ, ಅಥಣಿ, ಕಾಗವಾಡ, ಗೋಕಾಕ್, ವಿಜಯನಗರ, ಶಿವಾಜಿನಗರ ಮತ್ತು ಕೆ. ಆರ್. ಪೇಟೆ.