ಬೆಳಗಾವಿ: ಇತ್ತೀಚೆಗೆ ಭಾರಿ ಮಳೆಯಿಂದಾಗಿ ಆದ ಹಾನಿಗೆ ಪರಿಹಾರ ನೀಡಲು ಅನುದಾನವಾಗಿ ಪ್ರತಿ ಶಾಸಕರಿಗೆ 52 ಕೋಟಿ ರೂಪಾಯಿ ನೀಡುವುದಾಗಿ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿ ವರೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕರು ಅತಿವೃಷ್ಟಿ ಪರಿಹಾರಕ್ಕಾಗಿ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಅತೃಪ್ತಿ ಹೊರ ಹಾಕಿದ್ದಾರೆ. ಈ ವೇಳೆ ಸಿಎಂ ಪ್ರತಿ ಶಾಸಕರಿಗೆ 52 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು. ಅದರಲ್ಲಿ ಎರಡು ಕೋಟಿ ದೇವಸ್ಥಾನ ನಿರ್ಮಾಣ ಅಥವಾ ಜೀರ್ಣೋದ್ಧಾರಕ್ಕೆ ಬಳಸಲು ಅನುದಾನ ನೀಡುವುದಾಗಿ ತಿಳಿಸಿದರು.
ಪರಿಷತ್ ಚುನಾವಣೆ ಸದ್ದು..
ಶಾಸಕಾಂಗ ಸಭೆಯಲ್ಲಿ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಚುನಾವಣೆಯಲ್ಲಿ ಕೆಲವರು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. ಶಾಸಕರಾದ ನಮ್ಮನ್ನೇ ಕಡೆಗಣನೆ ಮಾಡಲಾಗಿದೆ. ಇದು ಸರಿಯಾದ ಕ್ರಮ ಅಲ್ಲ. ಪಕ್ಷಕ್ಕೆ ನಾವು ದುಡಿದಿಲ್ವಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಗೆ ಬಂದಿರುವ ಕೆಲವು ಹಾಲಿ ಶಾಸಕರು ಪುನಃ ಕಾಂಗ್ರೆಸ್ಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ಯತ್ನಾಳ್ ಸಭೆಯಲ್ಲೇ ಸೂಚ್ಯವಾಗಿ ತಿಳಿಸಿದರು ಎನ್ನಲಾಗ್ತಿದೆ. ಇದಕ್ಕೆ ಕೆಲ ಶಾಸಕರೂ ಧ್ವನಿಗೂಡಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಚಿವರು ಮಾತು ಕೇಳುತ್ತಿಲ್ಲ:
ಶಾಸಕಾಂಗ ಸಭೆಯಲ್ಲಿ ಶಾಸಕ ರೇಣುಕಾಚಾರ್ಯ ಕೆಲ ಸಚಿವರು ತಮ್ಮ ಮಾತು ಕೇಳದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮಗೆ 52 ಕೋಟಿ ರೂ. ಸಾಲುವುದಿಲ್ಲ. ಶಾಸಕರ ಕ್ಷೇತ್ರಕ್ಕೆ 100 ಕೋಟಿ ರೂ. ನೀಡಬೇಕು. ಇನ್ನೂ ಕೆಲ ಸಚಿವರು ನಮ್ಮ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಕೆಲ ಶಾಸಕರು ಸಚಿವ ಡಾ. ಕೆ. ಸುಧಾಕರ್ ಅವರ ಹಸೆರು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಸುಧಾಕರ್ ಆಗಲಿ ಯಾರೇ ಆಗಲಿ, ಹೀಗೆ ಮಾಡಿದ್ರೆ ನಾವು ಸಚಿವರ ಕಚೇರಿ ಮುಂದೆ ಧರಣಿ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುಧಾಕರ್ ಹೆಸರು ಪ್ರಸ್ತಾಪ ಮಾಡುತ್ತಿದ್ದಂತೆ ಸಭೆಯಲ್ಲಿ ಇದ್ದ ಶಾಸಕರು ರೇಣುಕಾಚಾರ್ಯಗೆ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು ಎನ್ನಲಾಗ್ತಿದೆ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ರೇಣುಕಾಚಾರ್ಯ ಇದೇ ವೇಳೆ ದೂರಿದರು.
ಇದನ್ನೂ ಓದಿ: ಮೈಸೂರು: ಚಾಕುವಿನಿಂದ ಮನಬಂದಂತೆ ಚುಚ್ಚಿ ಯುವಕನ ಬರ್ಬರ ಕೊಲೆ
ಬಳಿಕ ಮಾತನಾಡಿದ ಶಾಸಕ ರಾಜುಗೌಡ, ಶಾಸಕರಿಗೆ ಬಿಡಿಎ ಸೈಟ್ ಕೊಡಬೇಕು ಎಂದು ಪ್ರಸ್ತಾಪಿಸಿದರು. ಬಿಡಿಎ ಅಧ್ಯಕ್ಷ ವಿಶ್ವನಾಥ್ ಇಲ್ಲೇ ಇದ್ದಾರೆ. ಅವರ ಜೊತೆ ಮಾತಾಡಿ ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ಎರಡು ತಾಸು ನಡೆದ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರತ್ಯೇಕ ಸಭೆ ಮಾಡ್ತೇನೆ ಎಂದ ಸಿಎಂ ಬೊಮ್ಮಾಯಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತ: ಸಿಬಿಐಗೆ ಅಚ್ಚರಿಯ ಪತ್ರ ಬರೆದ ಆರೋಪಿ ಇಂದ್ರಾಣಿ ಮುಖರ್ಜಿ!