ಬೆಂಗಳೂರು: ನಾಳೆಯಿಂದ ವಿಧಾನಮಂಡಲ ಜಂಟಿ ಅಧಿವೇಶನ ಹಿನ್ನೆಲೆ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಬಿಜೆಪಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಲು ಇಂದು ಸಂಜೆ ಶಾಸಕಾಂಗ ಸಭೆ ಕರೆದಿದೆ. ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಖಾಸಗಿ ತಾರಾ ಹೋಟೆಲ್ನಲ್ಲಿ ಪಕ್ಷದ ಶಾಸಕಾಂಗ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 5 ಗಂಟೆಗೆ ಆರಂಭವಾಗುವ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ರಾಜೀನಾಮೆ ಅಂಗೀಕಾರ ಇಲ್ಲವೇ, ನಿರಾಕರಣೆ ಆಗದ ಹಿನ್ನೆಲೆ ಸದ್ಯ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿಯೇ ಇದ್ದಾರೆ. ಹೀಗಾಗಿ ಇವರ ನೇತೃತ್ವದಲ್ಲೇ ಸಭೆ ನಡೆಯಲಿದೆ.
2019 ರ ಡಿ.9 ರಂದು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದರು. ಶಾಸಕಾಂಗ ಸಭೆಗೆ ಹಾಜರಾಗುವಂತೆ ಕಾಂಗ್ರೆಸ್ನ ಎಲ್ಲಾ ಶಾಸಕರಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ಬೀದರ್ ಶಾಹೀನ್ ಶಾಲೆಯ ಮೇಲಿನ ದೇಶದ್ರೋಹ ಆರೋಪ, ತಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲು ವಿಚಾರ, ಪೊಲೀಸ್ ಇಲಾಖೆಯ ದುರ್ಬಳಕೆ ಕುರಿತು ಹೋರಾಟ ನಡೆಸಿ, ಹಲವು ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರಕ್ಕೆ ಮುಜುಗರ ತರಲು ತಯಾರಿ ಮಾಡಿಕೊಳ್ಳಲು ಇಂದಿನ ಸಭೆ ಕರೆಯಲಾಗಿದೆ. ಜೊತೆಗೆ ಇಂದಿನ ಸಭೆಯಲ್ಲಿ ತಮ್ಮ ಶಾಸಕರಿಗೆ ಸಲಹೆ ಸೂಚನೆಯನ್ನು ಸಿದ್ದರಾಮಯ್ಯ ನೀಡಲಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ :
ಸಂಜೆ 7 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜಂಟಿ ಅಧಿವೇಶನ ಹಾಗೂ ಪರಿಷತ್ನ ಒಂದು ಸ್ಥಾನಕ್ಕೆ ಉಪ ಚುನಾವಣೆ ನಾಳೆಯೇ ನಡೆಯಲಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಅಧಿವೇಶನದ ಮೊದಲ ದಿನ ಪರಿಷತ್ನ ಒಂದು ಸ್ಥಾನಕ್ಕೆ ವಿಧಾನಸಭೆಯಿಂದ ಚುನಾವಣೆ ನಡೆಯುವ ಹಿನ್ನೆಲೆ, ವಿಧಾನಸಭೆಯಲ್ಲಿ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡುವ ಸಾಧ್ಯತೆ ಇದೆ. ಇನ್ನು ಜಂಟಿ ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ, ಟೀಕೆಗಳಿಗೆ ತಕ್ಕ ಉತ್ತರ ಕೊಡಲು ಸಭೆಯಲ್ಲಿ ರಣತಂತ್ರ ರೂಪಿಸಲಾಗುವುದು. ಪ್ರತಿಪಕ್ಷಗಳ ಏಟಿಗೆ ಯಾವ ರೀತಿ ತಿರುಗೇಟು ನೀಡಬೇಕು, ನೆರೆ ಪರಿಹಾರ ಕಾಮಗಾರಿಗಳು ಸೇರಿದಂತೆ ಸರ್ಕಾರ ಕೃಗೊಂಡಿರುವ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಚಿವ ಸಂಪುಟದಲ್ಲಿ ಅನೇಕರು ಮೊದಲ ಬಾರಿಗೆ ಸಚಿವರಾಗಿದ್ದು, ಸದನದಲ್ಲಿ ಪ್ರತಿಪಕ್ಷಗಳ ಪ್ರಶ್ನೆ, ಟೀಕೆಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ನೂತನ ಸಚಿವರಿಗೆ ಪಾಠ ಮಾಡಲಿದ್ದಾರೆ.