ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ (Bitcoin Case) ಬಗ್ಗೆ ಎಲ್ಲೆಡೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ರಾಜಕೀಯ ವಲಯದಲ್ಲಿ ಈ ಸುದ್ದಿ ಹೆಚ್ಚು ಸದ್ದು ಮಾಡ್ತಿದೆ. ಹಗರಣದ ಹಿಂದೆ ರಾಜಕೀಯ ನಾಯಕರು ಹಾಗೂ ಐಪಿಎಸ್ ಅಧಿಕಾರಿಗಳ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿರುವ ಬಗ್ಗೆ ಗುಸು ಗುಸು ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಿಟ್ ಕಾಯಿನ್ ವಿಚಾರ ಹಾಟ್ ಟಾಪಿಕ್ ಆಗಿತ್ತು. ವದಂತಿಗಳಿಗೆಲ್ಲಾ ಪೂರ್ಣ ವಿರಾಮ ಹಾಕುವ ರೀತಿಯಲ್ಲಿ ನಗರ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ನ.4ರಂದು ದಾಖಲಾದ ಡ್ರಗ್ಸ್ ಪ್ರಕರಣದಿಂದ ಬಿಟ್ ಕಾಯಿನ್ ವಿಚಾರ ಬಯಲಾಗಿತ್ತು. 500 ಗ್ರಾಂ ಹೈಡ್ರೋ ಗಾಂಜಾ ಸಹಿತ ಓರ್ವ ಆರೋಪಿಯನ್ನ ಬಂಧಿಸಲಾಗಿತ್ತು. ಮುಂದುವರೆದ ತನಿಖೆಯಲ್ಲಿ ಬಂಧಿತರಾದ 10 ಜನರಲ್ಲಿ ಶ್ರೀಕೃಷ್ಣ (Hacker Shreeeki) ಸಹ ಓರ್ವ ಆರೋಪಿಯಾಗಿದ್ದ. ತನಿಖೆಯಲ್ಲಿ ಕ್ರಿಫ್ಟೋ ಕರೆನ್ಸಿ (cryptocurrency) ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಶ್ರೀಕಿ ಬಾಯ್ಬಿಟ್ಟಿದ್ದ. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾಯಿಸಲಾಗಿತ್ತು. ತನಿಖೆಯ ದೃಷ್ಟಿಯಿಂದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯುವುದು ಅಗತ್ಯವಾಗಿತ್ತು. ಕೋರ್ಟ್ ಅನುಮತಿ ಪಡೆದು ಸೈಬರ್ ತಜ್ಞರ ಸಮ್ಮುಖದಲ್ಲಿ ವ್ಯಾಲೆಟ್ ತೆರೆದಿದ್ದೆವು. 31.8 ಬಿಟ್ ಕಾಯಿನ್ ಜಪ್ತಿ ಮಾಡಿ ಪಾಸ್ ವರ್ಡ್ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.
ಪಾರದರ್ಶಕ ತನಿಖೆ: ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ಪ್ರಕರಣದ ತನಿಖೆ ನಡೆಸಿಲ್ಲ. ಕೆ.ಜಿ.ನಗರ, ಸೈಬರ್ ಕ್ರೈಂ, ಅಶೋಕನಗರ 3 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಹ ಸಲ್ಲಿಸಲಾಗಿದೆ. ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನ ಒಳಗೊಂಡಂತೆ ತನಿಖೆ ನಡೆಸಲಾಗಿದೆ. ತನಿಖೆಯ ಪ್ರತಿ ಹಂತದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವೇಲ್ ಅಲರ್ಟ್ ನಲ್ಲಿ 14,682 ಬಿಟ್ ಕಾಯಿನ್ ವರ್ಗಾವಣೆ ಆಗಿದೆ ಎಂದಿರುವುದು ಆಧಾರರಹಿತ.
ಶ್ರೀಕಿ ಬಳಿ ಸ್ವಂತ ವ್ಯಾಲೆಟ್ ಇಲ್ಲ: ಈ ನೆಲದ ಕಾನೂನಿನಂತೆ ನಿಷ್ಪಕ್ಷಪಾತ ತನಿಖೆ ಮಾಡಲಾಗಿದೆ. ನಿರ್ದಿಷ್ಟವಲ್ಲದ, ಸಾಮಾಜಿಕ ಜಾಲತಾಣದ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಬಂಧಿತ ಆರೋಪಿಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆದರೂ ಸಹ ಯಾವುದೇ ವಿದೇಶಿ, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆ ನಮ್ಮನ್ನ ಸಂಪರ್ಕಿಸಿಲ್ಲ. ಆರೋಪಿ ಹೇಳಿಕೊಂಡಿರುವಂತೆ ಹ್ಯಾಕಿಂಗ್ ಆಗಿದೆ ಎನ್ನುವುದನ್ನ ಯಾರೊಬ್ಬರೂ ಖಚಿತಪಡಿಸಿಲ್ಲ. ಬಳಿಕ ಬಿಟ್ ಕಾಯಿನ್ ವರ್ಗಾವಣೆಗಾಗಿ ನ್ಯಾಯಾಲಯದ ಅನುಮತಿ ಪಡೆಯಲಾಯಿತು. ವ್ಯಾಲೆಟ್ ತೆರೆದಾಗ ಪತ್ತೆಯಾಗಿದ್ದು 186.811 ಬಿಟ್ ಕಾಯಿನ್. ಅಸಲಿಗೆ ಆರೋಪಿ ಶ್ರೀಕೃಷ್ಣನ ಬಳಿ ಸ್ವಂತ ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ. ಆತನಿಂದ ವಶಕ್ಕೆ ಪಡೆದಿದ್ದು ಲೈವ್ ವ್ಯಾಲೆಟ್ ಆಗಿರುತ್ತದೆ. ಮತ್ತು ಆ ಲೈವ್ ವ್ಯಾಲೆಟ್ ನ ಕೀ ಸಹ ಆರೋಪಿ ಬಳಿ ಪತ್ತೆಯಾಗಿರುವುದಿಲ್ಲ. ಹಾಗಾಗಿ ವಶಪಡಿಸಿಕೊಂಡ ವ್ಯಾಲೆಟ್ ನ್ನ ಹಾಗೆಯೇ ಬಿಡಲಾಗಿದೆ. ಈ ಎಲ್ಲ ವಿವರಣೆಗಳ ಸಹಿತ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಟರ್ ಪೋಲ್ ವರದಿ: ಪ್ರಕರಣ ದಾಖಲಾಗಿ 1 ವರ್ಷಗಳೇ ಕಳೆದಿವೆ. ಬಿಟ್ ಕಾಯಿನ್ ಅಥಾರಿಟಿ ಸಹ ನಮ್ಮನ್ನ ಸಂಪರ್ಕಿಸಿಲ್ಲ. ಆರೋಪಿ ಸಾಕಷ್ಟು ವೆಬ್‌ಸೈಟ್ ಹ್ಯಾಕ್ ಮಾಡಿರುವುದಾಗಿ ಸ್ವಯಂ ಹೇಳಿಕೆ ನೀಡಿದ್ದಾನೆ. ಆದರೇ ಯಾವುದೇ ಹೆಚ್ಚಿನ ಮಾಹಿತಿಯನ್ನ ಆರೋಪಿ ನೀಡಿಲ್ಲ. ಸೈಬರ್ ತಜ್ಞರ ಸಲಹೆ ಪಡೆದಾಗ ಆರೋಪಿ ಹೇಳಿರುವ ಸಾಕಷ್ಟು ವಿಚಾರ ಆಧಾರರಹಿತ ಎಂದು ಸಾಬೀತಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಂಟರ್ ಪೋಲ್ ಗೆ ಮನವಿ ಮಾಡಲಾಗಿದೆ. ವರದಿ ಬಂದ ಬಳಿಕ ಪ್ರಕರಣಕ್ಕೆ ತಾರ್ಕಿಕವಾಗಿ ಅಂತ್ಯ ಸಿಗಲಿದೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇಡೀ ಪ್ರಕರಣ ಬೆಂಗಳೂರಿನಿಂದ ಹುಟ್ಟಿಕೊಂಡಿದೆ. ಪ್ರಕರಣದ ಮಾಹಿತಿಯನ್ನ ಸಿಬಿಐ ಮೂಲಕ ಇಂಟರ್ ಪೋಲ್ ಗೆ ನೀಡಲಾಗಿದೆ. ಸಂಬಂಧಿಸಿದ ಯಾರೇ ಇದ್ದರೂ ಇಂಟರ್ ಪೋಲ್ ಗಮನಕ್ಕೆ ತರಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.
5 ಸಾವಿರ ರೂ. ದಂಡ ವಿಧಿಸಿ ಶ್ರೀಕಿ ಬಿಡುಗಡೆ: ಇತ್ತೀಚಿನ ಆತನ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಆತನ ಬಳಿ ಪತ್ತೆಯಾದ ಮಾದಕ ವಸ್ತು ಕುರಿತು ತನಿಖೆಗೆ ಕಸ್ಟಡಿಗೆ ಕೇಳಲಾಗಿತ್ತು. ರಕ್ತ ಮತ್ತು ಮೂತ್ರದ ಮಾದರಿ ಪಡೆಯಲು ಅನುಮತಿ ಪಡೆಯಲಾಗಿತ್ತು. ವಿಕ್ಟೋರಿಯಾದಲ್ಲಿ ಸಾಧ್ಯವಾಗದ ಕಾರಣ ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ರಕ್ತ ಮತ್ತು ಮೂತ್ರದ ಮಾದರಿಯನ್ನ ಎಫ್ ಎಸ್ ಎಲ್ ಗೆ ಕಳಿಸಲಾಗಿತ್ತು. ಎಫ್ ಎಸ್ ಎಲ್ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಬಿಟ್ ಕಾಯಿನ್ ಪ್ರಕರಣ ಆರೋಪಿ ಸಂಪೂರ್ಣ ವಿಚಾರಣೆ ಕೋರಿ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಅರ್ಜಿ ತಿರಸ್ಕೃತಗೊಳಿಸಿ 5 ಸಾವಿರ ರೂ. ದಂಡ ವಿಧಿಸಿ ಶ್ರೀಕಿಯನ್ನು ಬಿಡುಗಡೆ ಮಾಡಿತ್ತು.