ಬೆಂಗಳೂರು: ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Bitcoin Shriki) ವಿರುದ್ಧದ ಬಿಟ್ ಕಾಯಿನ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಶ್ರೀಕಿ ಹಾಗೂ ಸ್ನೇಹಿತರ ಮೇಲಿನ ಎಲ್ಲಾ ಕೇಸ್ಗಳ ಮಾಹಿತಿ ಸಂಗ್ರಹಕ್ಕೆ ಕೇಂದ್ರ ತನಿಖಾ ತಂಡಗಳು ಮುಂದಾಗಿವೆ. ಈ ಮೂಲಕ ಕೇಂದ್ರ ಗುಪ್ತಚರ ವಿಭಾಗ (ಐಬಿ), ಜಾರಿ ನಿರ್ದೇಶನಾಲಯದಿಂದ (ಇಡಿ) ಮಾಹಿತಿ ಸಂಗ್ರಹಿಸಲು ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಪೊಲೀಸ್ ಕಮಿಷನರ್ರಿಂದ ರಿಪೋರ್ಟ್ ತಯಾರಿಯೂ ನಡೆಯುತ್ತಿದೆ.
ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ರಾಜಕೀಯ ಆರೋಪ- ಪ್ರತ್ಯಾರೋಪಗಳ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ನಗರ ಪೊಲೀಸ್ ಇಲಾಖೆಯಿಂದ ಶ್ರೀಕಿ ತನಿಖೆಯು ಪಾರದರ್ಶಕವಾಗಿ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ. ಆದರೂ ಸಹ ಕೇಸ್ ಗಂಭೀರ ಪಡೆದುಕೊಳ್ಳುತ್ತಿದ್ದು ಕೇಂದ್ರ ತನಿಖಾ ತಂಡಗಳು ಕೇಸ್ಗೆ ಎಂಟ್ರಿ ಆಗುವ ಕಾಲ ಸನ್ನಿಹಿತವಾಗಿದೆ.
ಯಾವುದೇ ಸಂದರ್ಭದಲ್ಲಿ ಕೇಂದ್ರ ತನಿಖಾ ತಂಡಗಳಾದ ಇಡಿ, ಇಂಟಲಿಜೆನ್ಸ್ ಬ್ಯೂರೋ ಮತ್ತು ಸಿಬಿಐ, ನಗರ ಪೊಲೀಸ್ ಆಯುಕ್ತರ ಬಳಿ ಶ್ರೀಕಿ ಬಗ್ಗೆ ತನಿಖೆಯ ರಿಪೋರ್ಟ್ ಕೇಳಬಹುದು. ಆದ್ದರಿಂದ ಶ್ರೀಕಿ ಮತ್ತು ಸ್ನೇಹಿತರ ಎಲ್ಲಾ ಕೇಸ್ಗಳ ಬಗ್ಗೆ ಈಗಾಗಲೇ ಪೊಲೀಸ್ ಕಮಿಷನರ್ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಕೇಸ್ಗಳ ತನಿಖೆ ಮಾಡಿದ್ದ ಆಯಾ ಡಿಸಿಪಿಗಳಿಗೆ ವರದಿ ಕೊಡಲು ಸೂಚಿಸಿದ್ದಾರೆ.
ಶ್ರೀಕಿ ಮೇಲೆ ಆರು ಪ್ರಕರಣಗಳಿವೆ:
1. 2018ರಲ್ಲಿ ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಆರೋಪಿ..
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶ್ರೀಕಿ
2. ಕೆಂಪೇಗೌಡ ನಗರ ಠಾಣೆಯಲ್ಲಿ 4/11/2020 ರಲ್ಲಿ ಹೈಡ್ರೋ ಗಾಂಜಾ ಸಪ್ಲೈ ಕೇಸ್
ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಗಾಂಜಾ ಪಾರ್ಸಲ್ ತೆಗೆದುಕೊಳ್ಳುವಾಗ ಶ್ರೀಕಿ ಬಂಧನವಾಗಿದ್ದ. ಮಾಜಿ ಶಾಸಕರ ಮಗ, ಸ್ನೇಹಿತರೂ ಈ ಕೇಸ್ಲ್ಲಿದ್ದರು.
3. ಕಾಟನ್‌ಪೇಟೆಯಲ್ಲಿ 2020ರಲ್ಲಿ ಸಿಸಿಬಿ ತನಿಖಾಧಿಕಾರಿಯಿಂದ ಪ್ರಕರಣ.
ಶ್ರೀಕಿ ಮತ್ತು ಸುನೀಶ್ ಹೆಗ್ಡೆ ಟೀಂನಿಂದ ವಿವಿಧ ಸರ್ವರ್ಗಳನ್ನ ಹ್ಯಾಕ್ ಮಾಡಿ ವಂಚಿಸಿರುವ ಆರೋಪ.
4. ಜಯನಗರದಲ್ಲಿ 2020 ರಲ್ಲಿ ಶ್ರೀಕಿ ಸ್ನೇಹಿತರ ಕಿಡ್ನಾಪ್ ಮಾಡಿ ಹಲ್ಲೆ.
ಶ್ರೀಕಿಗಾಗಿ ಹುಡುಕಾಟ ನಡೆಸಿ ಸ್ನೇಹಿತನನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಸುನೀಶ್ ಹೆಗ್ಡೆ ಅಂಡ್ ಟೀಂ. ಹಣಕಾಸಿನ ವಿಚಾರಕ್ಕೆ ಶ್ರೀಕಿ ಸಿಕ್ಕಿಲ್ಲ ಎಂದು ಹೇಳಿ ಸ್ನೇಹಿತನನ್ನ ಮನೆಯಿಂದ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಟೀಂ.
5. ಜೀವನ್ ಭೀಮಾ ನಗರ ಠಾಣೆಯಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಕೇಸ್..
ಶ್ರೀಕಿ ಮತ್ತು ಸ್ನೇಹಿತ ವಾಸುದೇವ್ ಭಟ್ ಬಂಧನ, ವಿಚಾರಣೆ.
6. ಸಿಐಡಿ ಸೈಬರ್ ಠಾಣೆಯಲ್ಲಿ ಶ್ರೀಕಿ ವಿರುದ್ಧ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿ ಹಣ ವಂಚನೆ ಪ್ರಕರಣ...
ರಾಜ್ಯ ಸರ್ಕಾರದ ಇ ಪ್ರೊಕ್ಯುಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿ 18 ಕೋಟಿ ವಂಚನೆ. ಕಾಟನ್ ಪೇಟೆ ಕೇಸ್ನಲ್ಲಿ ಬಂಧಿತನಾಗಿದ್ದ ಶ್ರೀಕಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಸಿಐಡಿ.
ಈ ಎಲ್ಲಾ ಪ್ರಕರಣದಲ್ಲಿ ಬಿಟ್ ಕಾಯಿನ್ ಪ್ರಕರಣ ಸದ್ದು ಮಾಡುತ್ತಿದೆ. ಇದಲ್ಲದೆ ನಗರದಲ್ಲಿ ಮೂರ್ನಾಲ್ಕು ಟೀಂಗಳಿಂದ ಶ್ರೀಕಿಯನ್ನ ಹೈಜಾಕ್ ಮಾಡಿ ಹೊರಹೊಲಯದ ರೆಸಾರ್ಟ್ಗಳಲ್ಲಿ ಇರಿಸ್ತಿದ್ದು, ಶ್ರೀಕಿಗಾಗಿಯೇ ಸ್ನೇಹಿತರ ಟೀಂಗಳ ನಡುವೆ ಗಲಾಟೆ ನಡೆದಿತ್ತು. ಅದಕ್ಕಾಗಿ ಒಂದೊಂದು ಟೀಂ, ಶ್ರೀಕಿಯ ಸಂಪರ್ಕವೇ ಸಿಗದಂತೆ ವ್ಯವಹಾರ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. ಗೋವಾ ಹಾಗೂ ಪಂಚತಾರ ಹೋಟೆಲ್ಗಳಲ್ಲಿ ತಿಂಗಳುಗಟ್ಟಲೆ ಇರಿಸಿ ಬಿಟ್ ಕಾಯಿನ್ ವ್ಯವಹಾರ ಮಾಡ್ತಿದ್ರು ಎನ್ನಲಾಗಿದೆ. ಶ್ರೀಕಿಗೆ ಹೈಡ್ರೋ ಗಾಂಜಾ ಮತ್ತು ಮರಿಜುವಾನ ಗಾಂಜಾ ಸಪ್ಲೈ ಮಾಡ್ತಿದ್ದ ಟೀಂ, ಹಣ ಮಾಡಿಕೊಡುವಂತೆ ಫ್ರೆಶರ್ ಹಾಕಿ ಕರೆದುಕೊಂಡು ಹೋಗ್ತಿದ್ರು ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶ್ರೀಕಿ ಅಜ್ಞಾತ ಸ್ಥಳದಲ್ಲಿ ತಂಗಿದ್ದಾನೆ. ಒಂದೆಡೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿರೋ ಶ್ರೀಕಿ ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ರಿಲೀಸ್ ಆದ ಬಳಿಕ ತಂದೆಯನ್ನ ಆಸ್ಪತ್ರೆಯಲ್ಲಿ ಭೇಟಿಯೂ ಆಗಿಲ್ಲ. ಕಾಣದ ಕೈಗಳಿಂದ ಶ್ರೀಕಿಯನ್ನ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Cryptocurrency-Bitcoin: ಏನಿದು ಕ್ರಿಪ್ಟೋಕರೆನ್ಸಿ? ಭಾರತದಲ್ಲಿ ಬಿಟ್ ಕಾಯಿನ್ ವ್ಯವಹಾರ ಹೇಗಿದೆ?