ಬೆಂಗಳೂರು: ಕಳೆದ ವಾರ ನಗರದ ಬ್ಯಾಟರಾಯನಪುರ ಠಾಣೆಯ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ವೊಂದು ಕಳುವಾಗಿತ್ತು. ಈ ಬಗ್ಗೆ ಬೈಕ್ ಕಳೆದುಕೊಂಡ ಮಾಲೀಕ ತಕ್ಷಣ ಠಾಣೆಗೆ ಬಂದು ದೂರು ನೀಡಿದ್ದ. ಬ್ಯಾಟರಾಯನಪುರ ಪೊಲೀಸರು ಉದಾಸೀನ ತೋರದೇ ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.
ಬೈಕ್ ಕಳ್ಳತನದ ಬಗ್ಗೆ ಠಾಣೆಗೆ ದೂರು ಬಂದ ಕೂಡಲೇ ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅಲರ್ಟ್ ಆಗಿ ಕಳುವಿನ ಹಿಂದೆ ದೊಡ್ಡ ಜಾಲ ಇದೆ ಎನ್ನುವುದನ್ನು ಪ್ರಾಥಮಿಕ ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ. ಬೈಕ್ ಕಳುವಾದ ಸುತ್ತ ಮುತ್ತ ಸುಮಾರು ನೂರಕ್ಕೂ ಹೆಚ್ಚು ಸಿಸಿಟಿವಿ ಪರಶೀಲಿಸಿ ಬೈಕ್ ಕಳ್ಳರ ಜಾಡು ಹಿಡಿದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಆರೋಗ್ಯ ಇಲಾಖೆ ಎಡವಟ್ಟು: ನಾಲ್ಕು ತಿಂಗಳ ಹಿಂದೆ ನಿಧನ ಹೊಂದಿದ್ದವರಿಗೆ ಈಗ 2ನೇ ಡೋಸ್ ವ್ಯಾಕ್ಸಿನೇಷನ್!
ಬ್ಯಾಟರಾಯನಪುರ ಪೊಲೀಸರು ಲಾಕ್ ಆಗಿರುವ ಬೈಕ್ ಕದಿಯುತ್ತಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರಾದ ಕಬೀರ್, ಸಯ್ಯದ್, ಅಫ್ತರ್ ಬಂಧಿಸಿ ಆರೋಪಿಗಳಿಂದ 25 ಬೈಕ್, 24 ಮೊಬೈಲ್ ಹಾಗೂ 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಆಟೋ ವಶಕ್ಕೆ ಪಡೆದಿದ್ದಾರೆ.
ಬಂಧಿತರು ಮಂಗಳೂರು ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ ,ದರೋಡೆ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ದೊರೆತಿದ್ದು ಹೆಚ್ಚಿನ ತನಿಖೆ ನೆಡೆಯುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ