ಬೆಂಗಳೂರು : ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಅನಂತ ರಾಜು ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಅನಾರೋಗ್ಯದ ಕಾರಣಕ್ಕೆ ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಆದರೆ, ಅದಾದ 2 ದಿನಗಳ ಬಳಿಕ ಅನಂತರಾಜು ಪತ್ನಿ ಸುಮಾ ಬ್ಯಾಡರಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ರೇಖಾ, ವಿನೋದ್ ಹಾಗೂ ಸ್ಪಂದನಾ ಎಂಬುವರು ನನ್ನ ಪತಿಯನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಕಿರುಕುಳ ನೀಡಿದ್ದರು ಎಂದಿದ್ದರು.
ಆದರೆ, ಸದ್ಯ ವೈರಲ್ ಆಗುತ್ತಿರುವ ಆಡಿಯೋದಲ್ಲಿ ರೇಖಾಗೆ ಫೋನ್ ಮಾಡಿರುವ ಸುಮಾ, 'ಅನಂತರಾಜುಗೆ ಕೈ ಮುರಿದು ಹಾರ್ಟ್ ಅಟ್ಯಾಕ್ ಆಗೋ ರೀತಿ ಆಗಿದೆ. ಆಸ್ಪತ್ರೆಗೆ ಸೇರಿಸಿದ್ದೇನೆ. ಅವನನ್ನ ಈಸಿಯಾಗಿ ಸಾಯೋಕೆ ಬಿಡಲ್ಲ. ನರಳಿ-ನರಳಿ ಸಾಯೋ ರೀತಿ ಮಾಡ್ತಿನಿ ಅಂತಾ ಧಮ್ಕಿ ಹಾಕಿದ್ದಾರೆ. ಈ ಆಡಿಯೋ ವೈರಲ್ ಆಗಿದ್ದು, ಸದ್ಯ ಸುಮಾ ಮೇಲೆಯೇ ಅನುಮಾನ ಮೂಡುವಂತೆ ಮಾಡಿದ್ದು,ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಂತಾಗಿದೆ.
ಓದಿ: ಹನಿಟ್ರ್ಯಾಪ್ ಬಲಿಯಾಗಿ 49 ಲಕ್ಷ ರೂ. ಕಳೆದುಕೊಂಡ ಜ್ಯೋತಿಷಿ : ಯುವತಿ ಸೇರಿ ಇಬ್ಬರು ಅರೆಸ್ಟ್
ಅಲ್ಲದೇ ಆಡಿಯೋ ವೈರಲ್ ಆದ ಬಳಿಕ ಡೆತ್ ನೋಟಿನ ಅಸಲಿಯತ್ತಿನ ಬಗ್ಗೆಯೂ ಪೊಲೀಸರಿಗೆ ಅನುಮಾನ ಆರಂಭವಾಗಿದೆ. ಅನಂತರಾಜು ಬರೆದಿದ್ದಾರೆ ಎನ್ನಲಾಗಿರುವ ಎರಡು ಡೆತ್ ನೋಟ್ಗಳನ್ನ ಸಾವಿಗೂ 20 ದಿನಗಳ ಹಿಂದೆಯೇ ಬಲವಂತವಾಗಿ ಬರೆಯಿಸಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಅನಂತರಾಜು ಹ್ಯಾಂಡ್ ರೈಟಿಂಗ್ ಸ್ಯಾಂಪಲ್ಸ್ ಜೊತೆಗೆ ಡೆತ್ ನೋಟ್ಗಳನ್ನ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರಿದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಮೇಲೆ ಪೊಲೀಸರ ಮುಂದಿನ ಹೆಜ್ಜೆ ನಿರ್ಧಾರವಾಗಿದೆ.