ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಹಲ್ಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ತಾರಾ ಹೋಟೆಲ್ನಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ತಂಗಿದ್ದ. ಹೋಟೆಲ್ಗೆ ಅವನ ಸ್ನೇಹಿತ ವಿಷ್ಣು ಭಟ್ ಕುಡಿದು ಹೋಟೆಲ್ ಸಿಬ್ಬಂದಿ ಜತೆ ಜಗಳವಾಡಿಕೊಂಡಿದ್ದಾನೆ. ಅಲ್ಲದೇ, ಹಲ್ಲೆಗೂ ಯತ್ನಿಸಿದ್ದಾನೆ. ಆರೋಪಿ ಶ್ರೀಕಿಯೂ ಕೂಷಡ ಹಲ್ಲೆ ನಡೆಸಲು ಮುಂದಾಗಿದ್ದ. ಇದರಿಂದ ಹೋಟೆಲ್ ಸಿಬ್ಬಂದಿ ಜೀವನ್ ಭಿಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಶ್ರೀಕಿ ಜೊತೆ, ವಿಷ್ಣುಭಟ್ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಇದೀಗ ಹಲ್ಲೆ ಪ್ರಕರಣದಲ್ಲಿ ಬಂಧಿಯಾಗಿರುವುದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಡಿಸಿಪಿ ಶರಣಪ್ಪ ಶ್ರೀಕಿಯನ್ನು ಖುದ್ದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಶ್ರೀಕಿ ರಾಯಲ್ ಆರ್ಚಿಡ್ 5 ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದ ಎಂದು ತಿಳಿದುಬಂದಿದೆ.
ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್ಕೇಸ್ನಲ್ಲಿ ಕೂಡ ಬಂಧಿಸಿದ್ದರು. ವಿಚಾರಣೆ ವೇಳೆ ಶ್ರೀಕಿ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಅನ್ನು ಕೂಡ ಹ್ಯಾಕ್ ಮಾಡಿದ ಬಗ್ಗೆ ಉಸುರಿದ್ದ. ಪ್ರಕರಣ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಈತ ಅಂತಾರಾಷ್ಟ್ರೀಯ ವೆಬ್ಸೈಟ್, ಪೋಕರ್ ಗೇಮ್ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದ. ಒಟ್ಟು ಶ್ರೀಕಿ ಬಳಿ ಇದ್ದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು.