ಬೆಂಗಳೂರು: ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮಹಿಳೆಯರ ಭದ್ರತಾ ದೃಷ್ಟಿಯಿಂದ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಇದರಿಂದ ಎಚ್ಚರಗೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರದ ಓಲಾ, ಉಬರ್ ಚಾಲಕರೊಂದಿಗೆ ಸಭೆ ನಡೆಸಿ ಮಹಿಳೆಯರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಮಂದಿ ಓಲಾ, ಉಬರ್ ಕ್ಯಾಬ್ಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇಲ್ಲಿನ ಕ್ಯಾಬ್ಗಳ ಚಾಲಕರು ಸಹ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಗಳು ಈ ಹಿಂದೆ ನಡೆದಿದ್ದವು. ಹೀಗಾಗಿ ಮಹಿಳೆಯರ ಹಿತದೃಷ್ಟಿಯಿಂದ ಓಲಾ, ಉಬರ್ ಚಾಲಕರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.
ಕಾರಿನ ಮುಂಭಾಗದ ಕನ್ನಡಿ ಬಳಿ ಕಡ್ಡಾಯ ಕ್ಯಾಮರಾ ಅಳವಡಿಸಬೇಕು. ಕತ್ತಲಿರುವ ಪ್ರದೇಶಗಳಲ್ಲಿ ಮಹಿಳೆಯರು ಒಂಟಿಯಾಗಿ ಇರುವಾಗ ಕರೆದೊಯ್ಯಬಾರದು. ಕ್ಯಾಮರಾ ಜೊತೆಗೆ ಡಿಸ್‌ಪ್ಲೇ ಬೋರ್ಡ್ ಕಡ್ಡಾಯವಾಗಿರಬೇಕು. ತುರ್ತು ಬಟನ್ ಅಳವಡಿಸಬೇಕು. ಚಾಲಕನ ಸಂಪೂರ್ಣ ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಈ ನಿಯಮಗಳನ್ನು ಪಾಲಿಸದೇ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.