ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯವರು ಹಣ ಪಡೆದು ಮಾರಾಟ ಮಾಡುತ್ತಾರೆ ಎಂದು ಅವರ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಭಾಸ್ಕರ್ ರಾವ್ ಪಿಎಸ್‌ಐ ಹಾಗೂ ಇತರ ಸರ್ಕಾರಿ ಹುದ್ದೆಗಳನ್ನು ಹಣ ಪಡೆದು ಬಿಕರಿ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈಗ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಯತ್ನಾಳ್ ಸಿಎಂ ಹುದ್ದೆಯನ್ನೂ ಹಣಕ್ಕೆ ಮಾರಾಟ ಮಾಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 2,500 ಕೋಟಿ ರೂಪಾಯಿ ಕೊಟ್ಟರೆ ಸಿಎಂ ಸ್ಥಾನ ಸಿಗುತ್ತದೆ ಎಂದಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಬಿಜೆಪಿಯಿಂದ ಸಿಎಂ ಆದವರು ಹೇಗೆ ಹೊಂದಿಸಿದ್ದಾರೆ ಹಾಗೂ ಹಣ ಪಡೆದ ಹೈಕಮಾಂಡ್ ಅದರಿಂದ ಏನು ಮಾಡಿದೆ ಎಂಬುದು ಬಯಲಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ: ಪ್ರಜಾಪ್ರಭುತ್ವಕ್ಕೆ ಬಿಜೆಪಿಯು ಅತ್ಯಂತ ಮಾರಕವಾಗಿ ಪರಿಣಮಿಸಿದೆ. ಮುಖ್ಯಮಂತ್ರಿಯಂತಹ ಹುದ್ದೆಯನ್ನು ಹೆಚ್ಚು ಹಣ ಕೊಟ್ಟವರಿಗೆ ನೀಡುವ ಪ್ರವೃತ್ತಿ ಒಳ್ಳೆಯದಲ್ಲ. ಪದೇ ಪದೆ ಕರ್ನಾಟಕಕ್ಕೆ ಬರುವ ಅಮಿತ್ ಶಾ ಯತ್ನಾಳ್ ಬಹಿರಂಗ ಪಡಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಬೇಕು. ಇದರಲ್ಲಿ ಅವರಿಗೆ ಎಷ್ಟು ಪರ್ಸೆಂಟ್ ತಲುಪಿದೆ ಎನ್ನುವುದು ಬಯಲಾಗಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಅಕ್ರಮ ಬೆನ್ನಲ್ಲೇ ಪೊಲೀಸ್ ನೇಮಕಾತಿ ವಿಭಾಗದಲ್ಲಿನ 12 ಮಂದಿ ವರ್ಗಾವಣೆ