ಬೆಂಗಳೂರು: ಅವರಿಬ್ಬರು ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ಗಳು. ಪ್ರವೃತ್ತಿಯಲ್ಲಿ ಮಾತ್ರ ಖತರ್ನಾಕ್ ಬೈಕ್ ಖದೀಮರು. ಮನೆ ಮುಂದೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿ ನಂಬರ್ ಪ್ಲೇಟ್ ಚೇಂಜ್ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಜನವರಿ 22ರಂದು ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿವೃತ್ತ ಎಎಸ್ಐ ಒಬ್ಬರು ಬೈಕ್ ಕಳ್ಳತನವಾಗಿರುವ ಸಂಬಂಧ ಪ್ರಕರಣ ದಾಖಲು ಮಾಡಿದ್ದರು. ಕೇಸ್ ದಾಖಲು ಮಾಡಿಕೊಂಡಿದ್ದ ಇನ್ಸ್ಪೆಕ್ಟರ್ ಬಿ.ಎನ್.ಲೋಕಾಪುರ ನೇತೃತ್ವದ ತಂಡ ಸೆರೆಯಾಗಿದ್ದ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕುಣಿಗಲ್ ಮೂಲದ ಶರವಣ ಹಾಗೂ ಹನುಮಂತರಾಯ ಎಂಬುವರನ್ನು ಬಂಧಿಸಿ 11 ಲಕ್ಷ ರೂ. ಮೌಲ್ಯದ 16 ಬೈಕ್ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ 4 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಟಿಆರ್ ಮಿಲ್ ಬಳಿ ಗ್ಯಾರೇಜ್ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಆರೋಪಿಗಳು ಹಣದಾಸೆಗಾಗಿ ಬೈಕ್ ಕದಿಯುವ ಸಂಚು ರೂಪಿಸಿಕೊಂಡು ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಕಳ್ಳತನ ಮಾಡುವ ಬೈಕ್ಗಳನ್ನ ಕುಣಿಗಲ್ಗೆ ತೆಗೆದುಕೊಂಡು ಹೋಗಿ ನಂಬರ್ ಪ್ಲೇಟ್ಗಳನ್ನ ಬದಲಾಯಿಸಿ ಕೆಲ ದಿನಗಳ ಬಳಿಕ ಮತ್ತೆ ರಾಜಧಾನಿಗೆ ತಂದು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.
ಗ್ರಾಹಕರು ಡ್ಯಾಕುಮೆಂಟ್ ಬಗ್ಗೆ ಪ್ರಶ್ನೆ ಮಾಡಿದಾಗ ಊರಿನಲ್ಲಿರುವುದಾಗಿ ತಿಳಿಸಿ ಯಾಮಾರಿಸುತ್ತಿದ್ದರು. ಇಬ್ಬರ ಬಂಧನದಿಂದಾಗಿ ಚಾಮರಾಜಪೇಟೆ, ಕುಮಾರಸ್ವಾಮಿ ಲೇಔಟ್, ಚಂದ್ರಾಲೇಔಟ್, ಕೆಂಪೇಗೌಡನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳನ್ನು ಬೇಧಿಸದಂತಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.