ಆನೇಕಲ್: ಕರ್ನಾಟಕ ಹೌಸಿಂಗ್ ಬೋರ್ಡ್ (KHB) ಸೂರ್ಯನಗರ ಬಡಾವಣೆಯ ಮೊದಲ ಹಂತದ ನಿವಾಸಿಗಳಿಗೆಂದು ಆಸ್ಪತ್ರೆ ನಿರ್ಮಿಸಿ ವರ್ಷಗಳೇ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನಾ ಭಾಗ್ಯ ಕಂಡಿಲ್ಲ. ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಕಟ್ಟಡದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ, ಮದ್ಯದ ಬಾಟಲಿಗಳೇ ತುಂಬಿ ಹೋಗಿದೆ. ಕರ್ನಾಟಕ ಗೃಹ ಮಂಡಳಿ ಸರ್ಕಾರಿ ಆಸ್ಪತ್ರೆ ಎನ್ನುವಂತಹ ನಾಮಫಲಕವೊಂದನ್ನು ಬಿಟ್ಟರೆ, ಇಡೀ ಕಟ್ಟಡವೇ ಗಬ್ಬೆದ್ದು ನಾರುತ್ತಿದೆ. ಇದರ ಪಕ್ಕದಲ್ಲಿನ ಉದ್ಯಾನವನವೂ ನಿವಾಸಿಗಳ ಉಪಯೋಗಕ್ಕೆ ಬಾರದೆ ಸೊರಗಿದೆ. ಉದ್ಯಾನವನದಲ್ಲಿ ಕನಿಷ್ಠ ನಿವಾಸಿಗಳು ಓಡಾಡಿದ್ದರೆ ಪಕ್ಕದ ಆಸ್ಪತ್ರೆ ಈ ದುಸ್ಥಿತಿಗೆ ಬರುತ್ತಿರಲಿಲ್ಲ.
ಈ ಕಟ್ಟಡ ನಿರ್ಮಾಣವಾಗಿ 7ರಿಂದ 8 ವರ್ಷ ಕಳೆದಿದೆ. ಕೂಗಳತೆ ದೂರದಲ್ಲಿ ಆನೇಕಲ್ ಶಾಸಕರ ಮನೆ ಇದ್ದರೂ ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನು ಓದಿ: ಮೀನು ಹಿಡಿಯಲು ಹೋಗಿದ್ದ ಸ್ನೇಹಿತರು: ದೋಣಿ ಮಗುಚಿ ಯುವಕ ನಾಪತ್ತೆ
ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಎಷ್ಟೋ ಮಂದಿ ಸಾವನ್ನಪ್ಪಿದ್ದರು. ಈ ಆಸ್ಪತ್ರೆ ಸರಿ ಇದ್ದಿದ್ದರೆ ಸ್ಥಳೀಯರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಸೂರ್ಯನಗರ ಬಡಾವಣೆಯಲ್ಲಿ ಸಾವಿರಾರು ಕುಟುಂಬಗಳು ವಾಸವಿದ್ದು, ಸುತ್ತಮುತ್ತ ಅನೇಕ ಹಳ್ಳಿಗಳಿಗೆ ಆಸ್ಪತ್ರೆಯ ಸೌಲಭ್ಯ ಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.