ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ 'ಬೆಂಗಳೂರು ಮಾರಾಟಕ್ಕಿಟ್ಟ ಬಿಜೆಪಿ' ಸರಣಿ ಟ್ವೀಟ್ ಅಭಿಯಾನದಡಿ ಆಕ್ರೋಶ ವ್ಯಕ್ತಪಡಿಸಿದೆ.
ಒಂದೆಡೆ ಕೇಂದ್ರ ಸರ್ಕಾರದಿಂದ ಜಿಎಸ್ಟಿ ಮೊತ್ತದ ಪಾಲು ತರುವಲ್ಲಿ ವಿಫಲವಾಗಿರುವ ಆರೋಪ ಮಾಡುವ ಜೊತೆಗೆ ಮಹಾನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಅನುಕೂಲಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ವೀಟ್ನಲ್ಲಿ ಭ್ರಷ್ಟ ರಾಜ್ಯ ಬಿಜೆಪಿ ಸರ್ಕಾರ ಭೂಗಳ್ಳರು, ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿ ಬೆಂಗಳೂರನ್ನೇ ಮಾರಾಟಕ್ಕಿಟ್ಟಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 18 ಕಿ.ಮೀ ವ್ಯಾಪ್ತಿಯ 21,000 ಎಕರೆ ಸರ್ಕಾರಿ ಜಮೀನು ಮಾರಾಟಕ್ಕೆ ಮುಂದಾಗಿರುವ ಬಿಜೆಪಿ ಸರ್ಕಾರದ ಹಗಲು ದರೋಡೆಯ ಪ್ರಯತ್ನ ಖಂಡನೀಯ ಎಂದಿದೆ.
ಭೂಗಳ್ಳರು ಹಾಗೂ ಒತ್ತುವರಿದಾರರಿಂದ ಸರ್ಕಾರಿ ಜಮೀನು ವಶಪಡಿಸಿಕೊಳ್ಳಲಾಗದ ನಾಲಾಯಕ್ ರಾಜ್ಯ ಬಿಜೆಪಿ ಸರ್ಕಾರ, ಅದೇ ಒತ್ತುವರಿದಾರರು ಹಾಗೂ ಭೂಗಳ್ಳರಿಂದ ಹಣ ಪಡೆದು ಅವರಿಗೆ ಬೆಂಗಳೂರಿನ ಬೆಲೆಬಾಳುವ ಸರ್ಕಾರಿ ಜಮೀನು ಮಾರಲು ಹೊರಟಿದೆ. ಬೆಂಗಳೂರು ಮಾರಾಟದ ಲಾಭ ಕೇವಲ ಬಿಜೆಪಿ ಹಾಗೂ ಭೂಗಳ್ಳರಿಗೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಿಎಸ್ಟಿ ಪಾಲು ಕೇಳದ ಆರೋಪ: ದುರಾಡಳಿತ, ಭ್ರಷ್ಟಾಚಾರದಿಂದ ರಾಜ್ಯದ ಖಜಾನೆಯನ್ನು ಬರಿದಾಗಿಸಿರುವ ರಾಜ್ಯ ಸರ್ಕಾರ, ಕೇಂದ್ರದಿಂದ ಜಿಎಸ್ಟಿ ಪಾಲು ತರಲೂ ಆಗದೆ ರಾಜ್ಯದ ಮೇಲೆ 33,000 ಕೋಟಿ ರೂ. ಹೆಚ್ಚುವರಿ ಸಾಲ ಹೊರಿಸಿದೆ. ಈಗ ಬೆಂಗಳೂರಿನ ಸಾವಿರಾರು ಎಕರೆ ಸರ್ಕಾರಿ ಜಮೀನು ಮಾರಿ ರಾಜ್ಯವನ್ನೇ ದಿವಾಳಿ ಮಾಡಲು ಹೊರಟಿದೆ ಎಂದು ದೂರಿದೆ.
ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ: ನೆರೆ ರಾಜ್ಯದ ವಿಷಯಗಳ ಬಗ್ಗೆ ಧ್ವನಿ ಎತ್ತುವ ಸಂಸದ ತೇಜಸ್ವಿ ಸೂರ್ಯ ಅವರೇ, ನೆರೆ ಹಾವಳಿ, ಕೊರೊನಾ, ಅವೈಜ್ಞಾನಿಕ ಲಾಕ್ಡೌನ್ನಿಂದಾಗಿ ರಾಜ್ಯದ ಜನರ ಬದುಕು ಬೀದಿಗೆ ಬಿದ್ದಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು, ನೆರೆ ಪರಿಹಾರ, ಹೆಚ್ಚುವರಿ ಅನುದಾನ ನೀಡುವಂತೆ ಆಗ್ರಹಿಸಲು ನಿಮಗೇನು ಭಯ? ಬಿಜೆಪಿ ಆದ್ಯತೆ ಏನೆಂದು ಇದರಿಂದ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.