ಬೆಂಗಳೂರು: ತಡರಾತ್ರಿ ಸುರಿದ ಮಳೆಯ ಅವಾಂತರದಿಂದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಕೆ.ಪಿ.ಅಗ್ರಹಾರದ 8ನೇ ಕ್ರಾಸ್ನಲ್ಲಿ ವಾಸವಾಗಿದ್ದ ವೆಂಕಟೇಶ್ ಮೃತ ವ್ಯಕ್ತಿ.
ವೆಂಕಟೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ಇವರ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ಇಬ್ಬರು ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಗೆ ಮಳೆ ನೀರು ನುಗ್ಗಿತ್ತು. ಜೊತೆಗೆ ಮಳೆಯಿಂದ ಏರಿಯಾದಲ್ಲಿ ವಿದ್ಯುತ್ ಹೋಗಿತ್ತು. ಒಳನುಗ್ಗಿದ್ದ ನೀರನ್ನು ಆಚೆ ಹಾಕುವಾಗ ಕರೆಂಟ್ ಬಂದಿದೆ. ಈ ವೇಳೆ ಕರೆಂಟ್ ಆನ್ ಮಾಡಲು ಮುಂದಾದಾಗ ಸ್ವಿಚ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟಿದ್ದಾನೆ. ರಾತ್ರಿಯೇ ಕೆ.ಪಿ.ಅಗ್ರಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರಾದ ನೀಲು ಫಾತೀಮಾ, 'ಕಳೆದ 13 ವರ್ಷಗಳಿಂದ ವೆಂಕಟೇಶ್ ದಂಪತಿ ವಾಸವಾಗಿದ್ದರು. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೆಲ್ಲಾ ನೀರು ತುಂಬಿಕೊಂಡಿತ್ತು. ಈ ಹಿಂದೆ ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತಿರಲಿಲ್ಲ. ಹೊಸ ಪೈಪ್ ವ್ಯವಸ್ಥೆ ಅಳವಡಿಸಿದ್ದರಿಂದ ಮನೆಗೆ ನೀರು ತುಂಬಿಕೊಂಡಿದೆ' ಎಂದರು.
ಇದನ್ನೂ ಓದಿ: Bengaluru Rain: ಏರ್ಪೋರ್ಟ್ ಟರ್ಮಿನಲ್ ಬಳಿ ನಿಂತ ನೀರು, ಸಂಚಾರಕ್ಕೆ ಅಡ್ಡಿ