ಬೆಂಗಳೂರು: ಆಫ್ರಿಕಾ ಪ್ರಜೆಗಳಿಂದ ಪುಂಡಾಟ ಅತಿಯಾದ ಹಿನ್ನೆಲೆಯಲ್ಲಿ ನಗರದಲ್ಲಿರುವ ಆಫ್ರಿಕಾದ ವಿವಿಧ ಪ್ರಜೆಗಳೊಂದಿಗೆ ಪೂರ್ವ ವಿಭಾಗದ ಪೊಲೀಸರು ಸೌಹಾರ್ದಯುತ ಸಂವಾದ ನಡೆಸಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ನಡೆದ ಹಲೋ ಆಫ್ರಿಕಾ ಹೆಸರಿನ ಮಾತುಕತೆಯಲ್ಲಿ ನೈಜೀರಿಯಾ, ಉಗಾಂಡ, ಐವರಿ ಕೊಸ್ಟ್, ಕಾಂಗೋ, ಸುಡಾನ್ ಸೇರಿದಂತೆ ಆಫ್ರಿಕಾ ಖಂಡದ ವಿವಿಧ ರಾಷ್ಟ್ರಗಳ ಪ್ರಜೆಗಳು ಭಾಗಿಯಾಗಿ ಮಾತುಕತೆ ನಡೆಸಿದ್ದಾರೆ.
ಪಾಸ್‌ಪೋರ್ಟ್, ವೀಸಾ ಸರಿಯಾಗಿದ್ದರೆ ಯಾವುದೇ ತೊಂದರೆ ನೀಡುವುದಿಲ್ಲ. ನಿಮ್ಮ ನಿಮ್ಮ ಉದ್ಯಮ, ಶಿಕ್ಷಣಕ್ಕೆ ಇಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಅನಧಿಕೃತ ವಾಸ, ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಶಿಕ್ಷಾರ್ಹವಾಗಿದ್ದು, ಈ ನೆಲದ ಕಾನೂನಿನಂತೆ ನಡೆದುಕೊಳ್ಳುವುದು ಕಡ್ಡಾಯವೆಂದು ಸೂಚಿಸಲಾಗಿದೆ. ಇದೇ ವೇಳೆ ಪೊಲೀಸರ ಮುಂದೆ ಅಳಲು ತೋಡಿಕೊಂಡ ಕೆಲ ಆಫ್ರಿಕನ್ ಪ್ರಜೆಗಳು ಕೋವಿಡ್ ಸಂದರ್ಭದಲ್ಲಿ ತಾವು ಸಾಕಷ್ಟು ತೊಂದರೆ ಎದುರಿಸಿದ್ದು, ಅನೇಕರು ತಮ್ಮದೇ ಸಮುದಾಯದ ಮುಖಂಡರ ಮಾತು ಕೇಳದೆ ಅಡ್ಡದಾರಿ ಹಿಡಿದಿದ್ದಾರೆ ಎಂದು ಪೇಚಾಡಿಕೊಂಡಿದ್ದಾರೆ.
ನಗರದ ಬಾಣಸವಾಡಿ, ಹೆಣ್ಣೂರು, ವೈಟ್‌ಫೀಲ್ಡ್, ಕಮ್ಮನಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಆಫ್ರಿಕಾ ಪ್ರಜೆಗಳು ವಾಸಿಸುತ್ತಿದ್ದು, ಇತ್ತೀಚಿಗಷ್ಟೇ ಮನೆಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ ಕೆಲವರ ಬಳಿ ಮಾದಕ ವಸ್ತು ಪತ್ತೆಯಾಗಿತ್ತು. ಅಲ್ಲದೆ ವೀಸಾ ಅವಧಿ ಮುಗಿದ, ಪಾಸ್ ಪೋರ್ಟ್ ಇಲ್ಲದ ಸುಮಾರು 13 ಜನ ಅನಧಿಕೃತ ವಾಸಿಗಳನ್ನ ಬಂಧಿಸಲಾಗಿತ್ತು. ಸದ್ಯ ಎಫ್.ಆರ್.ಆರ್.ಓ (ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫಿಸ್ ) ವಶದಲ್ಲಿ ಬಂಧಿತರನ್ನ ಇರಿಸಲಾಗಿದ್ದು ಕಾನೂನು ಪ್ರಕ್ರಿಯೆ ಬಳಿಕ ಬಂಧಿತರನ್ನ ಆಯಾ ದೇಶಕ್ಕೆ ಕಳಿಸಲು ತಯಾರಿ ನಡೆಸಲಾಗಿದೆ.