ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿಯಾದ ರೌಡಿಶೀಟರ್ ಚಲ್ಲಘಟ್ಟ ಲೋಹಿತ್ ಅಲಿಯಾಸ್ ರೋಹಿತ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಇಂದಿರಾನಗರ ಠಾಣಾ ವ್ಯಾಪ್ತಿಯ ಕೊಲೆ, ಅಪಹರಣ ಪ್ರಕರಣದಲ್ಲಿ ಹಾಗೂ ಇತರ 17 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಲೋಹಿತ್ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಮನವಿ ಮಾಡಲಾಗಿದ್ದು, ಆದರೂ ಶರಣಾಗದ ಲೋಹಿತ್ ಪೊಲೀಸ್ ಹೆಡ್ಕಾನ್ಸ್ಟೇಬಲ್ ಸೈಯದ್ ಮೊಯೀನುಲ್ಲಾಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಲೋಹಿತ್ನ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಇಂದಿರಾನಗರ ಠಾಣೆ ಪಿಎಸ್ಐ ಅಮರೇಶ್ ಜೇಗರಕಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಷ್ಟೇ ಅಲ್ಲದೇ ಲೋಹಿತ್ ವಿರುದ್ಧ ಹೆಚ್ಎಸ್ಆರ್ ಲೇಔಟ್ ಮತ್ತು ಬನ್ನೇರುಘಟ್ಟ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ.
ಈ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಕವಿರಾಜ್ ಎಂಬಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದರು. ಜೆ ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಲ್ಲಘಟ್ಟ ಬಳಿ ಇಂದು ಫೈರಿಂಗ್ ನಡೆದಿದ್ದು, ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಭೇಟಿ ನೀಡಿ, ಪರಿಶೀಲಿಸಿದರು.
ಇದನ್ನೂ ಓದಿ: ಮಂಗಳೂರು: ಕಾರಿನಲ್ಲಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ