ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೋರಿಪಾಳ್ಯದ ಅಲ್ತಾಫ್ ಖಾನ್ ಕಾಂಗ್ರೆಸ್‌ಗೆ ಮರಳಿದ್ದಾರೆ.
ಅಲ್ತಾಫ್ ಖಾನ್ ನಿವಾಸಕ್ಕೆ ಇಂದು ಭೇಟಿಕೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಅಲ್ತಾಫ್ ನಿವಾಸದಲ್ಲಿ ಭರ್ಜರಿ ಬಿರಿಯಾನಿ ಊಟ ಸೇವಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಲ್ತಾಫ್ ಬದಲು ಜೆಡಿಎಸ್ ನಿಂದ ಅಮಾನತುಗೊಂಡ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮದ್ ಗೆ ಪಕ್ಷ ಟಿಕೆಟ್ ನೀಡಿತು. ಇದರಿಂದ ಬೇಸರಗೊಂಡಿದ್ದ ಅಲ್ಪಾಫ್ ಜೆಡಿಎಸ್ ಸೇರಿದ್ದರು.
ಜಮೀರ್ ವಿರುದ್ಧ ಹೀನಾಯವಾಗಿ ಸೋತಿದ್ದ ಅಲ್ತಾಫ್ ನಂತರದ ದಿನಗಳಲ್ಲಿ ತಟಸ್ಥವಾಗಿ ಉಳಿದಿದ್ದರು. ಚಾಮರಾಜಪೇಟೆಯ ಗೋರಿಪಾಳ್ಯ ವ್ಯಾಪ್ತಿಯಲ್ಲಿ ಉತ್ತಮ ಹಿಡಿತ ಹೊಂದಿದ್ದ ಇವರು ಮಾಜಿ ಕಾರ್ಪೋರೇಟರ್ ಕೂಡ ಆಗಿದ್ದಾರೆ. ಮೀಸಲಾತಿ ಬದಲಾದ ಹಿನ್ನೆಲೆ ತಮ್ಮ ಪತ್ನಿ ಸೀಮಾ ಖಾನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿದ್ದರು.
ಸದ್ಯ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಲ ಇನ್ನಷ್ಟು ಹೆಚ್ಚಿಸಿಕೊಳ್ಳಲು ಅವರನ್ನು ಮರಳಿ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಬಹುದಿನಗಳಿಂದ ನಡೆದಿತ್ತು. ಅಂತಿಮವಾಗಿ ಇಂದು ಅಧಿಕೃತವಾಗಿ ಅಲ್ತಾಫ್ ಕಾಂಗ್ರೆಸ್ ಗೆ ಸೇರ್ಪಡೆಯಾದರು. ತಮ್ಮ ನಿವಾಸದಲ್ಲೇ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿಕೊಂಡರು.
ಈ ಮೂಲಕ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಗೋರಿಪಾಳ್ಯ ವಾರ್ಡ್ ಉಳಿಸಿಕೊಳ್ಳುವ ಜೊತೆಗೆ ಕ್ಷೇತ್ರದ ಇನ್ನಷ್ಟು ವಾರ್ಡ್ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರ ತಂತ್ರಗಾರಿಕೆಗೆ ಅಲ್ತಾಫ್ ಖಾನ್ ಬಿದ್ದಿದ್ದಾರೆ.