ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ರಾತ್ರಿ ಭೇಟಿ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಖುದ್ದು ನಿಂತು ಸಿಬ್ಬಂದಿಯನ್ನು ಹುರಿದುಂಬಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಮೈದಾನದ ಪ್ರತಿ ಜಾಗವನ್ನೂ ಕೂಡಾ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಅವರು ಕಾರ್ಯಕ್ರಮ ಯಶಸ್ವಿಗೆ ಉಸ್ತುವಾರಿಗಳನ್ನು ಸ್ಥಳದಲ್ಲೇ ನೇಮಿಸಿದರು. ಯಾವುದೇ ಅನಾನುಕೂಲ ಆಗದಂತೆ ಉಸ್ತುವಾರಿಗಳಾಗಿ ಉಪವಿಭಾಗಾಧಿಕಾರಿ, ತಹಶೀಲ್ದಾರ್, ಇಬ್ಬರು ಕಂದಾಯ ಅಧಿಕಾರಿಗಳು ಸೇರಿ ಎಂಟು ಜನರನ್ನು ನೇಮಿಸಲಾಯಿತು.
ಮಾಧ್ಯಮ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಜಾಗ ಇದ್ದು ಸಂಚಾರಿ ಪೊಲೀಸರು ನೆರವಾಗುತ್ತಾರೆ. ವಿವಿಐಪಿ ಮೂವ್ ಮೆಂಟ್ ಆರಂಭವಾಗುವ ಸಮಯಕ್ಕೆ ರಸ್ತೆ ಬ್ಲಾಕ್ ಆಗುತ್ತದೆ. ಹೊಸಬರು ದಯಮಾಡಿ ಸೂಚನೆಗಳನ್ನು ಹಿರಿಯರಿಂದ ತಿಳಿದುಕೊಂಡು ಬರುವುದು ಉತ್ತಮ ಎಂದು ಈ ವೇಳೆ ಮಂಜುನಾಥ್ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ರಾತ್ರಿ ವೇಳೆ ಅಲ್ಪ ಪ್ರಮಾಣದಲ್ಲಿ ಮಳೆಯಾದ ಕಾರಣದಿಂದ ಕಾರ್ಯಕ್ರಮದ ಸ್ಥಳದಲ್ಲಿ ಕುರ್ಚಿಗಳನ್ನು ಬಟ್ಟೆಗಳಿಂದ ಹೊದಿಸಿ, ಒದ್ದೆಯಾಗದಂತೆ ರಕ್ಷಿಸಲಾಯಿತು.
ಇದನ್ನೂ ಓದಿ: ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ