ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನ ಬೆನ್ನಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರ ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ವಿರುದ್ಧ ಕೇಳಿಬಂದಿತ್ತು. ಆ ಬಳಿಕ ಅವರನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆ ಯೋಜನೆಯ ನಿರ್ದೇಶಕರ ಹುದ್ದೆಗೆ ಸರ್ಕಾರ ಎತ್ತಂಗಡಿ ಮಾಡಿತ್ತು.
ಪ್ರಕರಣದ ಹಿನ್ನೆಲೆ: ಕಳೆದ ಮೇ 21ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ ಮಹೇಶ್ ಎಂಬುವವರು ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆದು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಹೀಗಾಗಿ ಎಸಿಬಿ ತನಿಖಾಧಿಕಾರಿಗಳು ಡಿಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರವಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್, ಭೂ ವ್ಯಾಜ್ಯ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿ ಸೇರಿಸುವಂತೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಪಾತ್ರದ ಬಗ್ಗೆ ಸರಿಯಾಗಿ ತನಿಖೆ ನಡೆಸದ ಎಸಿಬಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಎಸಿಬಿ, ವಿಚಾರಣೆಗೆ ಹಾಜರಾಗುವಂತೆ ಮಂಜುನಾಥ್ ಅವರಿಗೆ ನೋಟಿಸ್ ನೀಡಿತ್ತು.
ಬೇಗೂರಿನ ನಿವಾಸಿಯೊಬ್ಬರು ಅನೇಕಲ್ನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದರು. ಡಿಸಿ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅರ್ಜಿದಾರರ ಅರ್ಜಿ ಕ್ಲಿಯರ್ ಮಾಡಬೇಕಾದರೆ ಆರೋಪಿ ಮಹೇಶ್ ಆರಂಭದಲ್ಲಿ 15 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ನಂತರ 5 ಲಕ್ಷ ರೂ.ಗೆ ಒಪ್ಪಿಕೊಂಡಿದ್ದರು. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಪ್ರಕರಣ ಇದಾಗಿದೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪ್ರಕರಣ: ಹಿರಿಯ ಐಪಿಎಸ್ ಅಧಿಕಾರಿ ಅರೆಸ್ಟ್, 10 ಪೊಲೀಸ್ ಕಸ್ಟಡಿಗೆ)