ಬೆಂಗಳೂರು: ನಗರವನ್ನೇ ಬೆಚ್ಚಿ ಬೀಳಿಸಿದ್ದ ಮಹದೇವಪುರ ವೃದ್ಧ ದಂಪತಿ ಹತ್ಯೆ ಪ್ರಕರಣದ ಆರೋಪಿ ಮಹಿಳೆಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರುಡಾಚಾರ್ ಪಾಳ್ಯದ ಚಂದ್ರೇಗೌಡ-ಲಕ್ಷ್ಮಮ್ಮ ದಂಪತಿ ಹತ್ಯೆ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಅನಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್ ಮುದಗಲ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆರೋಪಿ ಮಹಿಳೆ ಹಾಗೂ ಆಕೆಯ ಎರಡು ವರ್ಷದ ಪುತ್ರ ಗಂಭೀರ ಸ್ವರೂಪದ ಖಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಶಿಫಾರಸ್ಸು ಮಾಡಿರುವುದನ್ನು ಪರಿಗಣಿಸಿ ಕೋರ್ಟ್ ಜಾಮೀನು ನೀಡಿದೆ. ಆರೋಪಿ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ: 2019ರ ಅ.17ರ ಬೆಳಗ್ಗೆ ಗರುಡಾಚಾರ್ಯ ಪಾಳ್ಯದಲ್ಲಿ ವೃದ್ಧ ದಂಪತಿ ಚಂದ್ರೇಗೌಡ-ಲಕ್ಷ್ಮಮ್ಮ ದಂಪತಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಹಿಂದಿನ ದಿನ ದಂಪತಿಯ ತಲೆಗೆ ರಾಡ್ನಿಂದ ಬಡಿದು ಹತ್ಯೆ ಮಾಡಿ, ಮನೆಯಲ್ಲಿದ್ದ 305 ಗ್ರಾಂ. ಚಿನ್ನ ಹಾಗೂ ಬೆಳ್ಳಿ ಆಭರಣಗಳು ಹಾಗೂ ನಗದು ದೋಚಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಹದೇವಪುರ ಠಾಣೆ ಪೊಲೀಸರು ಅಮೃತಹಳ್ಳಿಯಲ್ಲಿ ವಾಸವಿದ್ದ ವೆಂಕಟೇಶ ಹಾಗೂ ಅರ್ಪಿತಾ ದಂಪತಿಯನ್ನು ಬಂಧಿಸಿದ್ದರು.
ಪೊಲೀಸರ ವಿಚಾರಣೆ ವೇಳೆ ಹಲವು ರೋಚಕ ಸಂಗತಿಗಳು ಬೆಳಕಿಗೆ ಬಂದಿದ್ದವು. ಆರೋಪಿ ದಂಪತಿಗಳಿಬ್ಬರೂ ಮೃತ ದಂಪತಿ ಚಂದ್ರೇಗೌಡ-ಲಕ್ಷ್ಮಮ್ಮ ದಂಪತಿಗೆ ದೂರದ ಸಂಬಂಧಿಕರಾಗಿದ್ದು, ಮೈಸೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪರಸ್ಪರ ಎದುರುಗೊಂಡಿದ್ದರು. ಈ ವೇಳೆ ಚಂದ್ರೇಗೌಡ ದಂಪತಿ ಮೈಮೇಲಿನ ಒಡವೆ ಗಮನಿಸಿದ್ದ ವೆಂಕಟೇಶ, ವೃದ್ಧ ದಂಪತಿ ಕೊಲೆ ಮಾಡಿ ಚಿನ್ನಾಭರಣ, ಹಣ ದೋಚಲು ಸಂಚು ರೂಪಿಸಿದ್ದ. ಇದಕ್ಕೆ ಮೊದಲಿಗೆ ಆಕ್ಷೇಪಿಸಿದ್ದ ಪತ್ನಿ ನಂತರ ನೆರವು ನೀಡಲು ಒಪ್ಪಿದ್ದಳು.
ಅದರಂತೆ, ಅ.16ರಂದು ಚಂದ್ರೇಗೌಡರ ಮನೆ ಬಳಿ ಬಂದಿದ್ದ ವೆಂಕಟೇಶ ಪತ್ನಿಯನ್ನು ಮನೆ ಮುಂಭಾಗ ಕಾವಲು ನಿಲ್ಲಿಸಿ, ಒಳ ಹೋಗಿ ಲಕ್ಷ್ಮಮ್ಮ ತಲೆಗೆ ಕಾರ್ ವೀಲ್ ಸ್ಪಾನರ್ ನಿಂದ ಹೊಡೆದು ಕೊಲೆ ಮಾಡಿದ್ದ. ವಾಕ್ ಮುಗಿಸಿ ವಾಪಸ್ಸಾದ ಚಂದ್ರೇಗೌಡ ಅರ್ಪಿತಾಳ ಕಂಕುಳಲ್ಲಿ ಅಳುತ್ತಿದ್ದ ಮಗುವನ್ನು ಕರೆದೊಯ್ದು ಪಕ್ಕದ ಅಂಗಡಿಯಲ್ಲಿ ತಿಂಡಿ ಕೊಡಿಸಿಕೊಂಡು ಬಂದಿದ್ದರು. ಮನೆಯೊಳಗೆ ಪ್ರವೇಶಿಸುತ್ತಲೇ ಚಂದ್ರೇಗೌಡರ ತಲೆಗೆ ಬಡಿದು ವೆಂಕಟೇಶ ಕೊಲೆ ಮಾಡಿದ್ದ. ನಂತರ ಮನೆಯಲ್ಲಿದ್ದ 305 ಗ್ರಾಂ. ಚಿನ್ನ, ಬೆಳ್ಳಿ ಆಭರಣಗಳು ಹಾಗೂ 9,500 ರೂ. ನಗದು ದೋಚಿ ಪರಾರಿಯಾಗಿದ್ದರು.
ಬಳಿಕ ಒಡವೆಗಳನ್ನು ಮಲ್ಲೇಶ್ವರಂನ ಧನಲಕ್ಷ್ಮಿ ಜುವೆಲ್ಲರಿಯಲ್ಲಿ ಮಾರಾಟ ಮಾಡಿ 8.67 ಲಕ್ಷ ಪಡೆದುಕೊಂಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಒಡವೆ ಮಾರಾಟ ಮಾಡಿದ್ದ 5.04 ಲಕ್ಷ ವಶಪಡಿಸಿಕೊಂಡಿದ್ದೇವೆ. ವೆಂಕಟೇಶ ಇದೇ ರೀತಿ ಮಂಡ್ಯದ ಸಂಬಂಧಿ ಗುಂಡೇಗೌಡ ಎಂಬುವರನ್ನೂ ಇದೇ ರೀತಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.