ಬೆಂಗಳೂರು : ತನ್ನ ಮಾಲೀಕ ಆಭರಣ ಮಾಡಲು ನೀಡಿದ ಚಿನ್ನದ ಗಟ್ಟಿಯನ್ನು ಕದ್ದು ಪರಾರಿಯಾದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೋಲ್ಕತ್ತಾದ ಸೀತಾಪುರ ಗ್ರಾಮದ ಅಮರ್ ಮಹಾಂತ್ ಎಂದು ಗುರುತಿಸಲಾಗಿದೆ.
ಎಂದಿನಂತೆ ಕಳೆದ ತಿಂಗಳ 31ರಂದು ಜ್ಯುವೆಲ್ಲರಿ ಮಾಲೀಕ ಮನೀಶ್, ಆರೋಪಿ ಅಮರ್‌ಗೆ ಚಿನ್ನದ ಗಟ್ಟಿಯನ್ನ ಕೊಟ್ಟು ಡಿಜೈನ್ ಜ್ಯುವೆಲ್ಸ್ ಮಾಡಿಸಿಕೊಂಡು ಬರುವಂತೆ ತಿಳಿಸಿದ್ದರು. ಸುಮಾರು ಒಂದು ಕೆಜಿ 304 ಗ್ರಾಂ ಚಿನ್ನವನ್ನ ಕೊಂಡೊಯ್ದಿದ್ದ ಆರೋಪಿ ಸಂಜೆಯಾದ್ರೂ ಹಿಂದಿರುಗಿರಲಿಲ್ಲ.
ಅಲ್ಲದೇ ಫೋನ್ ಸ್ವಿಚ್ ಆಫ್ ಮಾಡಿ, ಜಯನಗರದಲ್ಲಿ ವಾಸವಿದ್ದ ತನ್ನ ರೂಮ್ ಅನ್ನು ಖಾಲಿ ಮಾಡಿ 50 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಕೂಡಲೇ ತಿರುಮಲ ಜ್ಯುವೆಲ್ಸ್ ಮಾಲೀಕ ಮನೀಶ್ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಮೊಬೈಲ್ ನಂಬರ್ ಬೆನ್ನತ್ತಿದ್ದ ಪೊಲೀಸರಿಗೆ ಕೋಲ್ಕತ್ತಾದಲ್ಲಿ ಆರೋಪಿ ಇರುವುದಾಗಿ ಮಾಹಿತಿ ಸಿಕ್ಕಿತ್ತು.
ಆರೋಪಿಯು ಕದ್ದೊಯ್ದಿದ್ದ ಐವತ್ತು ಲಕ್ಷ ಮೌಲ್ಯದ ಒಂದು ಕೆಜಿ ಮುನ್ನೂರು ಗ್ರಾಂ ಚಿನ್ನಾಭರಣದಲ್ಲಿ ತನ್ನ ಅಳಿಯನಿಗೆ 300 ಗ್ರಾಂ ಒಡವೆ, ಮಗಳಿಗೆ 200 ಗ್ರಾಂ ಒಡವೆ ಹಾಗೂ ಸೊಸೆಗೆ 150 ಗ್ರಾಂ ಒಡವೆ ಮಾಡಿಸಿದ್ದ. ಘಟನೆ ನಡೆದ 15 ದಿನಗಳ ಬಳಿಕ ಜಯನಗರ ಪೊಲೀಸರಿಗೆ ಆರೋಪಿ ಕೋಲ್ಕತ್ತಾದ ಸೀತಾಪುರ ಗ್ರಾಮದಲ್ಲಿ ಸೆರೆಸಿಕ್ಕಿದ್ದಾನೆ.
ಇನ್ನು ಬಂಧಿತನ ವಿಚಾರಣೆ ವೇಳೆ ತನ್ನ ಹುಟ್ಟೂರು ಕೋಲ್ಕತ್ತಾದ ಸೀತಾಪುರದಲ್ಲಿ ಸಾಲ ಮಾಡ್ಕೊಂಡಿದ್ದೆ. ಅಲ್ಲದೇ ಅಳಿಯ, ತನ್ಮ ಮಗಳಿಗೆ ವರದಕ್ಷಿಣೆಗಾಗಿ ಪೀಡಿಸ್ತಿದ್ದ. ಹೀಗಾಗಿ, ಬೇರೆ ದಾರಿ ಕಾಣದೇ ಕಳ್ಳತನ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಓದಿ : IPL 2022: ಬದಲಾದ ಶೈಲಿಯಲ್ಲಿ ಈ ವರ್ಷದ ಐಪಿಎಲ್: ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!