ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ನಡುವಿನ ಕಿತ್ತಾಟ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ರೂಪಾ ವಿರುದ್ಧ ದೂರು ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ, ತಮ್ಮಿಬ್ಬರ ಆರೋಪಗಳ ಕುರಿತು ಸಮಗ್ರವಾದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಭೇಟಿ ನೀಡಿದರು. ತಮ್ಮ ವಿರುದ್ಧ ಸಿಎಸ್ಗೆ ದೂರು ನೀಡಿರುವುದಕ್ಕೆ ಪ್ರತಿಯಾಗಿ ನಿಗಮದ ವ್ಯವಸ್ಥಾಪಕಿ ಡಿ.ರೂಪಾ ವಿರುದ್ಧ ಸಿಎಂಗೆ ಪ್ರತಿ ದೂರು ನೀಡಿದ್ದಾರೆ ರಾಘವೇಂದ್ರ ಶೆಟ್ಟಿ. ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ರಾಘವೇಂದ್ರ ಶೆಟ್ಟಿ, ಮಾಧ್ಯಮಕ್ಕೆ ಮೊದಲು ಹೋಗಿದ್ದು ರೂಪಾ. ಸಿಎಸ್ಗೆ ಮೊದಲು ಲೆಟರ್ ಬರೆದದ್ದು ಕೂಡ ಅವರೇ.. ಈ ವಿಚಾರವಾಗಿ ಸಿಎಂ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೇನೆ. ಈ ವಿಚಾರದ ಬಗ್ಗೆ ಸಂಪೂರ್ಣ ತನಿಖೆ ಮಾಡಲಿ. ಅವರು ಏನು ಆರೋಪ ಮಾಡಿದ್ದಾರೆ ಅದನ್ನೂ ತನಿಖೆ ಮಾಡಲಿ. ನಾನು ಏನು ಹೇಳುತ್ತಿದ್ದೇನೆ ಅದನ್ನೂ ಸಹ ತನಿಖೆ ಮಾಡಲಿ ಎಂದು ಸಿಎಂಗೆ ಹೇಳಿದ್ದೇನೆ ಎಂದರು.
ಹೇಳಿರೋದಕ್ಕೆ ದಾಖಲೆ ಇದ್ಯಾ!? : ದಿನ ಬೆಳಗಾದರೆ ವಾಟ್ಸ್ಆ್ಯಪ್ನಲ್ಲಿ ಮಾಧ್ಯಮಗಳಿಗೆ ಸ್ಟೇಟ್ಮೆಂಟ್ ಕಳಿಸೋದು, ಯಾವುದೋ ಆಧಾರ ರಹಿತ ಆರೋಪ ಮಾಡೋದು ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ಲೆಟರ್ ಹೆಡ್ ಇದೆ. ಐಪಿಎಸ್ ಎಂಬ ಟ್ಯಾಗ್ ಇದೆ. ಇದರ ಜೊತೆಗೆ 1234 ಅಂತಾ ಹಾಕಿ ಅದನ್ನು ಬಳಿಸಿಕೊಂಡು ಎಲ್ಲಾ ಪೇಪರ್ಗೆ ಕಳುಹಿಸೋದು, ಆ್ಯಸಿಡ್ ಹಾಕ್ತೀನಿ ಎಂದು ಹೇಳಿರೋದಕ್ಕೆ ದಾಖಲೆ ಇದ್ಯಾ? ಏನಾದರು ವಿಡಿಯೋ ಫೂಟೇಜ್ ಇದೆಯಾ? ಅವರ ಘನೆತೆಗಿಂತ ಕೆಳಗಡೆ ಬಂದು ಮಾತನಾಡುತ್ತಿದ್ದಾರೆ. ಐಪಿಎಸ್ ಹುದ್ದೆಗೆ ಅಪಚಾರ ಮಾಡುತ್ತಿದ್ದಾರೆ. ಇದನ್ನೆಲ್ಲಾ ಸಿಎಂ ಗಮನಕ್ಕೆ ತಂದಿದ್ದೇನೆ, ಇದನ್ನು ತನಿಖೆಗೆ ಒಳಪಡಿಸುವ ಭರವಸೆ ಇದೆ. ಸಿಎಸ್ರನ್ನೂ ಸಹ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೇನೆ ಎಂದರು.
ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ : ಸುಸೈಡ್ ಮಾಡಿಕೊಳ್ಳುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರಾಘವೇಂದ್ರ ಶೆಟ್ಟಿ, ನೋಡಿ ಇದನ್ನೆಲ್ಲ ಅವರು ಎಡಿಟ್ ಮಾಡಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ಎಡಿಟ್ ಮಾಡಿದ್ದಾರೆ. ಆ್ಯಸಿಡ್ ಹಾಕ್ತೀನಿ ಅನ್ನೋದನ್ನು ಎಲ್ಲಿ ಹೇಳಿದ್ದೇನೆ ನಾನು? ಅದನ್ನು ಕಳಿಸಿಲ್ವಾ ಹಾಗಿದ್ದರೆ. ಅವರಿಗೆ ಎಡಿಟಿಂಗ್ ಗೊತ್ತಿದೆ. ಎಲ್ಲಾ ಇಲಾಖೆಯ ಫೈಲ್ ತೆಗೆಯಿರಿ, ಆಗ ಸತ್ಯ ಹೊರಬರಲಿದೆ.
ಬರೀ ಗಾಳಿಯಲ್ಲಿ ಗುಂಡು ಹೊಡೆಯೋದು ಮಾಡುತ್ತಿದ್ದಾರೆ. ಅವರಿಗೆ ಫ್ರಂಟ್ ಪೇಜ್ ಸುದ್ದಿ ಆಗಬೇಕು, ಅದಕ್ಕೆ ಏನೇನು ಹೇಳಬೇಕೋ ಅದನ್ನೆಲ್ಲ ಹೇಳುತ್ತಿದ್ದಾರೆ. ನಾನು ಅವರ ವಿಚಾರ ಇಟ್ಟುಕೊಂಡು ಪ್ರಚಾರಕ್ಕೆ ಹೋಗಬೇಕಿಲ್ಲ. ನನಗೆ ತನಿಖೆ ಆಗಬೇಕು ಅಷ್ಟೇ.. ಇಬ್ಬರ ಆರೋಪಗಳ ಬಗ್ಗೆಯೂ ತನಿಖೆಯಾಗಿ ಸತ್ಯ ಹೊರ ಬರಲಿ ಎಂದರು. ನಿಗಮಕ್ಕೆ ಏನು ನಷ್ಟವಾಗಿದೆ ಅದೂ ತನಿಖೆ ಆಗಬೇಕು. ಬಿಜೆಪಿ ಜವಾಬ್ದಾರಿ ಕೊಟ್ಟ ಕೆಲಸವನ್ನು ನನಗೆ ಮಾಡಲು ಬಿಡಲಿಲ್ಲ.
ನನಗೆ ಕಿರುಕುಳ ಕೊಟ್ಟು ತೊಂದರೆ ಕೊಟ್ಟಿದ್ದಾರೆ. ನಿಗಮದ ಆಲೋಚನೆಗಳಿಗೆ ತಕ್ಕಂತೆ ಕೆಲಸ ಮಾಡಲು ಬಿಡಲಿಲ್ಲ. 51 ಆಲೋಚನೆಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವೂ ಮಾಡಲಿಲ್ಲ. ಒಂದೇ ಒಂದು ಕಟ್ಟಡ ಕಟ್ಟಲಿಲ್ಲ. ₹40 ಕೋಟಿ ಇದ್ದ ನಿಗಮದ ಟರ್ನ್‌ಒವರ್ ₹22 ಕೋಟಿಗೆ ಬಂದಿದೆ. ಇವರು ಆಫೀಸ್ಗೆ ಬರುವುದು ದಿನಕ್ಕೆ ಎರಡು ಗಂಟೆ, ವಾರದಲ್ಲಿ ಎರಡು ದಿವಸ ಮಾತ್ರ. ಇದನ್ನೆಲ್ಲ ಹೇಳಿದಾಗ ಅಧ್ಯಕ್ಷರ ವಿರುದ್ಧ ದಾಖಲೆ ಇಲ್ಲದೆ ಆರೋಪ ಮಾಡುತ್ತಾರೆ. ಇವರಿಗೆ ಮಾಧ್ಯಮಕ್ಕೆ ಹೋಗಲು ಯಾರು ಅನುಮತಿ ಕೊಟ್ಟಿದ್ದು..? ಹೀಗಾಗಿ, ಇಬ್ಬರ ಆರೋಪಗಳನ್ನೂ ತನಿಖೆ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ : ನನ್ನ ವಿರುದ್ಧ ಮಾಡಿದ ಆರೋಪದ ಬಗ್ಗೆ ಡಿ.ರೂಪಾ ದಾಖಲೆ ಬಿಡುಗಡೆ ಮಾಡಲಿ : ರಾಘವೇಂದ್ರ ಶೆಟ್ಟಿ