ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಕೈ ನಾಯಕರ ಸಭೆ ನಗರದಲ್ಲಿ ನಡೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ್ ಕೌಜಲಗಿ, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರಿ ಫೈಟ್ ಕೊಟ್ಟಿದ್ದ ಕಾಂಗ್ರೆಸ್, ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ತಂತ್ರಗಾರಿಕೆ ರೂಪಿಸುವ ಕಾರ್ಯಾರಂಭಿಸಿದೆ. ಉಪಚುನಾವಣೆಯಲ್ಲಿ ತೋರಿಸಿದ ಪೈಪೋಟಿಯನ್ನೇ ಮುಂದಿನ ಎಲ್ಲಾ ಚುನಾವಣೆಯಲ್ಲೂ ತೋರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಅದಾಗಿ ಒಂದು ವರ್ಷದ ನಂತರ ನಡೆಯುವ ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಮಾಡಬೇಕಾದ ಸಂಘಟನೆಯ ಕೆಲಸಗಳ ಬಗ್ಗೆ ಮಾತುಕತೆ ನಡೆದಿದೆ. ಇದೇ ತಿಂಗಳಿಂದ ಪ್ರಚಾರ ಶುರು ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಬಳಸಿಕೊಳ್ಳಬೇಕಾದ ವಿಚಾರಗಳ ಬಗ್ಗೆ ರಣತಂತ್ರ ಹೆಣೆಯಲಾಗಿದೆ. ಆಂತರಿಕ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ ಚುನಾವಣೆ ಎದುರಿಸುವ ಬಗ್ಗೆ ನಾಯಕರು ಅಂತಿಮವಾಗಿ ಸತೀಶ್ ಜಾರಕಿಹೊಳಿ ನೀಡುವ ಮಾರ್ಗದರ್ಶನದಂತೆ ನಡೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ : ದೇಶಕ್ಕಾಗಿ ಸಾವರ್ಕರ್ ಹೋರಾಡಿದ್ದಾರೆ, ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ: ಕಾರಜೋಳ