ಬೆಂಗಳೂರು : ತಡರಾತ್ರಿ ಮನೆಗೆ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಮಗಳ ಪ್ರಿಯತಮನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ತಂದೆಯನ್ನು ಬೆಂಗಳೂರಿನ ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.
ವಿನೋಭಾವೆ ನಗರದಲ್ಲಿ ಆಟೋ ಚಾಲಕನಾಗಿದ್ದ ನಾರಾಯಣ್ ಬಂಧಿತನಾಗಿದ್ದಾನೆ. ತಮಿಳುನಾಡು ಮೂಲದ ನಿವೇಶ್ ಕುಮಾರ್ ಕೊಲೆಯಾದ ದುರ್ದೈವಿ. ಎರಡು ತಿಂಗಳ ಹಿಂದೆಯಷ್ಟೇ ಬಂದು ದೊಡ್ಡಪ್ಪನ ಮನೆಯಾದ ವಿನೋಭಾವೆ ನಗರದಲ್ಲಿ ನೆಲೆಸಿದ್ದನು.
ಒಂದೇ ಏರಿಯಾದಲ್ಲಿ ಆಗಿದ್ದರಿಂದ ನಾರಾಯಣ್ ಮಗಳನ್ನು ನಿವೇಶ್ ಪರಿಚಯ ಮಾಡಿಕೊಂಡಿದ್ದ. ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಆರೋಪಿ ನಾರಾಯಣ್ ಇಲ್ಲದಿರುವಾಗ ಆಗಾಗ ಮನೆಗೆ ನಿವೇಶ್ ಬಂದು ಹೋಗುತ್ತಿದ್ದ.
ಅದೇ ರೀತಿ ನವೆಂಬರ್ 28ರಂದು ನಾರಾಯಣ್ ಇಲ್ಲದಿರುವ ಸಮಯ ನೋಡಿಕೊಂಡು ಮನೆಗೆ ಬಂದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ನಾರಾಯಣ್ ಎಂಟ್ರಿ ಕೊಟ್ಟಿದ್ದ. ಮಗಳ ಜೊತೆ ನಿವೇಶ್‌ನನ್ನ ಕಂಡು ನಾರಾಯಣ್ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ನಿವೇಶ್ ತಲೆಗೆ ಹೊಡೆದಿದ್ದಾನೆ.
ಗಂಭೀರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ನಿವೇಶ್ ಕುಸಿದುಬಿದ್ದಿದ್ದಾನೆ. ಮನೆ ಬಳಿ ನಿವೇಶ್ ಮೃತಪಟ್ಟರೆ ತನ್ನ ಮೇಲೆ ಆಪಾದನೆ ಬರಲಿದೆ ಎಂಬ ಕಾರಣಕ್ಕಾಗಿ ಬೆಳಗಿನ ಜಾವ ಆಟೋ ಮೂಲಕ ವಿಕ್ಟೋರಿಯಾ ಆಸ್ಪತ್ರೆಯ ಬಳಿ ಶವ ಬಿಟ್ಟು ಎಸ್ಕೇಪ್ ಆಗಿದ್ದನು.
ಸ್ಥಳೀಯರು ಅಪರಿಚಿತ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದನ್ನು ಪ್ರಾಥಮಿಕ ತನಿಖೆ ವೇಳೆ ಕಂಡುಕೊಂಡಿದ್ದರು. ಮೃತನ ಹಿನ್ನೆಲೆ ಕೆದಕಿದಾಗ ಕೊಲೆ ಸಂಗತಿ ಬಯಲಾಗಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ಹಾಗೂ ಅಸಲಿ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆ!