ಬೆಂಗಳೂರು: ಹಿಂದೆಂದೂ ನಡೆಯದ ರೀತಿ ಮೂರು ತಿಂಗಳು ಬೆಂಗಳೂರು ನಗರ ಸಂಪೂರ್ಣ ಬಂದ್ ಆಗಿತ್ತು. ರಸ್ತೆ ಸಿಗ್ನಲ್ಗಳೂ ಖಾಲಿ ಖಾಲಿ, ಮಸೀದಿ ಮಂದಿರಗಳೂ ಬಾಗಿಲು ಮುಚ್ಚಿದ್ದವು. ಕೈಯಲ್ಲಿ ಬಿಡಿಗಾಸು ಇಲ್ಲದೇ ರಸ್ತೆ ಬದಿ, ಮಾರುಕಟ್ಟೆ ಬದಿಯಲ್ಲಿ ಮಲಗಿದ್ದ ಅನೇಕರಿಗೆ ಬಿಬಿಎಂಪಿ ರಾತ್ರಿ ತಂಗುದಾಣದಲ್ಲಿ ಆಶ್ರಯ ನೀಡಿತ್ತು.
ಲಾಕ್ಡೌನ್ನ ಮೂರೂ ತಿಂಗಳೂ ಸಹ ಒಬ್ಬರೂ ಬೀದಿ ಬದಿಯಲ್ಲಿ ಕಾಣಿಸಿಕೊಂಡಿಲ್ಲ. ಹಲವರು ರಸ್ತೆಬದಿಯ ಜೋಪಡಿಯಲ್ಲೇ ಅರೆ ಹೊಟ್ಟೆಯಲ್ಲಿ ಮಲಗಿದರು. ಮಂಗಳಮುಖಿಯರೂ ಮನೆಗಳಲ್ಲೇ ಉಳಿದು ಕೊಂಡಿದ್ದರು.
ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ಅಂಗಡಿ ಮುಂಗಟ್ಟುಗಳು, ರಸ್ತೆ ಸಿಗ್ನಲ್ಗಳಲ್ಲಿ ಮಂಗಳಮುಖಿಯರು ಭಿಕ್ಷೆ ಬೇಡುತ್ತಿದ್ದಾರೆ. ಕೈಯಿಲ್ಲದ, ಕಾಲಿಲ್ಲದವರು, ವೃದ್ಧರೂ ಸಿಗ್ನಲ್ ಗಳಲ್ಲಿ ವಾಹನ ಸವಾರರ ಮುಂದೆ ಭಿಕ್ಷೆಗಾಗಿ ಕೈಚಾಚುತ್ತಿದ್ದಾರೆ. ಆದ್ರೆ ಕೊರೊನಾ ಭೀತಿ ಇರುವ ಹಿನ್ನೆಲೆ ಭಿಕ್ಷುಕರು ಹತ್ತಿರ ಬರುವುದನ್ನೇ ತಡೆಯುತ್ತಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ಭಿಕ್ಷೆ ಹೆಸರಿನ ದಂಧೆಯೂ ಮತ್ತೆ ಮುಂದುವರಿದಿದೆ. ಯುವತಿಯರು, ಮಕ್ಕಳನ್ನು ಎತ್ತಿಕೊಂಡು ಬಂದು ಭಿಕ್ಷೆ ಬೇಡುವ ಪ್ರವೃತ್ತಿಯೂ ಮುಂದುವರಿದಿದೆ.
ನಗರದ ಮಸೀದಿ, ದರ್ಗಾಗಳ ಮುಂದೆ ಹೆಚ್ಚು ಜನ ಭಿಕ್ಷೆ ಬೇಡುವುದು ಕಾಣಸಿಗುತ್ತದೆ. ರಂಜಾನ್ ಹಬ್ಬವೂ ಲಾಕ್ಡೌನ್ನಲ್ಲಿ ಮುಗಿದ ಹಿನ್ನೆಲೆ ಧನಿಕರು, ಬಡವರಿಗೆ ದಾನ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಪ್ರಾರ್ಥನಾ ಮಂದಿರಗಳಿಗೆ ಜನರ ಓಡಾಟ ಕಡಿಮೆಯಾಗಿದೆ. ಸಂಜೆ ವೇಳೆ ಹೋಟೆಲ್, ತಳ್ಳುವ ಗಾಡಿಗಳಲ್ಲಿ ಈ ಹಿಂದೆ ಉಳಿದ ಊಟ ತಿಂಡಿ ಕೊಡುತ್ತಿದ್ದರು. ಇದೀಗ ಕೊರೊನಾ ಭೀತಿಯಿಂದಾಗಿ ಭಿಕ್ಷಕರನ್ನು ಹತ್ತಿರ ಸೇರಿಸಿಕೊಳ್ಳಲೂ ಭಯ ಬೀಳುತ್ತಿದ್ದಾರೆ.
ನಗರದ ನಿರಾಶ್ರಿತರಿಗೆ ಬಿಬಿಎಂಪಿ ರಾತ್ರಿ ತಂಗುದಾಣದ ಸೌಲಭ್ಯ ನೀಡಿದೆ. ಈಗಲೂ ಸೌಲಭ್ಯ ಮುಂದುವರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ. ಆದರೆ, ರಸ್ತೆ ಬದಿ, ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸಬೇಕಾದ ಸರ್ಕಾರದ ವ್ಯವಸ್ಥೆಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಡುಬಡವರಿಗೆ, ವಿಕಲಚೇತನರಿಗೆ ಜೀವನೋಪಾಯ ಕಲ್ಪಿಸುವಲ್ಲಿಯೂ ಸ್ಥಳೀಯ ಸಂಸ್ಥೆಗಳು ಸೋತಿವೆ.