ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವೆಂಕಟಸುಬ್ಬರಾವ್, ಟೆಕ್ನಿಷಿಯನ್ ಮಂಜುನಾಥ್ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಆರೋಗ್ಯ ಮಿತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ಮೀದೇವಮ್ಮ ಎಂಬುವವರು ಕರೊನಾ ಸೋಂಕಿನಿಂದ ಬಳಲಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಪೀಪಲ್ ಟ್ರೀ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಇಲ್ಲಿ ಐಸಿಯು ಬೆಡ್ ಖಾಲಿ ಇರಲಿಲ್ಲ. ಈ ಆಸ್ಪತ್ರೆಯ ಸಂಪರ್ಕದಲ್ಲಿದ್ದ ಆರೋಪಿಗಳು 1.20 ಲಕ್ಷ ರೂ. ಕೊಟ್ಟರೆ ಬೆಡ್ ಕೊಡಿಸುವುದಾಗಿ ಲಕ್ಷ್ಮೀದೇವಮ್ಮ ಪುತ್ರ ಲಕ್ಷ್ಮೀಶಗೆ ತಿಳಿಸಿದ್ದರು.
ತಾಯಿಗೆ ತುರ್ತಾಗಿ ಬೆಡ್ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಗೂಗಲ್ ಪೇ ಮೂಲಕ 50 ಸಾವಿರ ರೂ. ಹಾಗೂ 70 ಸಾವಿರ ಹಣವನ್ನು ನಗದು ರೂಪದಲ್ಲಿ ಆರೋಪಿಗಳಿಗೆ ಲಕ್ಷ್ಮೀಶ್ ಕೊಟ್ಟಿದ್ದರು. ಇದಾದ ಬಳಿಕ ಆರೋಪಿಗಳು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿದ್ದರು. ಆದರೆ, ಲಕ್ಷ್ಮೀದೇವಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಇದಾದ ಬಳಿಕ ಲಕ್ಷ್ಮೀಶ್ ಸಹೋದರ 112ಗೆ ಕರೆ ಮಾಡಿ ನಡೆದ ಸಂಗತಿ ವಿವರಿಸಿದ್ದರು.
ಇವರ ಸಲಹೆ ಮೇರೆಗೆ ಸದಾಶಿವನಗರ ಪೊಲೀಸರಿಗೆ ಲಕ್ಷ್ಮೀಶ್ ಈ ಕುರಿತು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. (ಬೆಡ್ ಬ್ಲಾಕಿಂಗ್ ದಂಧೆ: ಇಬ್ಬರು ವೈದ್ಯರು ಸೇರಿ 8 ಮಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ಸಿಸಿಬಿ)