ಬೆಂಗಳೂರು: ಸೈಬರ್ ಖದೀಮರು ಇನ್ಸ್ಟ್ರಾಗ್ರಾಮ್ ಫೋಟೊ, ಡಾನ್ಸ್ ವಿಡಿಯೋ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಸಿದ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರೊನಾ ಹಿನ್ನೆಲೆ ಆನ್ಲೈನ್ ಕ್ಲಾಸ್ಗೋಸ್ಕರ ಮೋಹನ್ ಕುಮಾರ್ ಅವರು 6ನೇ ತರಗತಿ ಓದುತ್ತಿದ್ದ ತಮ್ಮ ಮಗಳಿಗೆ ಮೊಬೈಲ್ ಕೊಡಿಸಿದ್ದರು. ಪಾಠ ಕೇಳಿದ ಬಳಿಕ ವಿದ್ಯಾರ್ಥಿನಿ ತನ್ನ ಇನ್ಸ್ಟ್ರಾಗ್ರಾಮ್ ಅಕೌಂಟ್ನಲ್ಲಿ ಭಾವಚಿತ್ರ ಹಾಗೂ ನೃತ್ಯ ಮಾಡಿದ ವಿಡಿಯೋ ಅಪ್ ಲೋಡ್ ಮಾಡಿಕೊಂಡಿದ್ದಾಳೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಸ್ಥಳೀಯ ಸೈಬರ್ ಕಿರಾತಕರು, ವಿಡಿಯೊ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿನಿಗೆ ಕರೆ ಮಾಡಿ ಬೆದರಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ವಿಡಿಯೋ ತಿರುಚಿ ಮಾರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಅ.30ರಂದು ಕರೆ ಮಾಡಿ ಮನೆ ಹತ್ತಿರ ಬರುವಂತೆ ಬೆದರಿಸಿದ್ದರು.
ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ, ತಂದೆಗೆ ನಡೆದ ವಿಷಯ ಹೇಳಿದ್ದಾಳೆ. ವಿಷಯ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ, ಸಂಜಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಆಧರಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.