ಬೆಂಗಳೂರು: ರಿಯಲ್ ಎಸ್ಟೇಟ್ ಹಾಗೂ ಬಿಡಿಎ ಬ್ರೋಕರ್ ಆಗಿ ಗುರುತಿಸಿಕೊಂಡಿದ್ದ ಆರ್.ಟಿ.ನಗರ ನಿವಾಸಿ ಮೋಹನ್ ಮನೆ ಮೇಲೆ ದಾಳಿಯನ್ನು ಎಸಿಬಿ ಅಧಿಕಾರಿಗಳು ಅಂತ್ಯಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೋಹನ್ ಬಿಡಿಎ ಅಧ್ಯಕ್ಷ ವಿಶ್ವನಾಥ್ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ವಿಶ್ವನಾಥ್ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದೆ. ಆ ಕಾರಣಕ್ಕಾಗಿ ಒಂದೂವರೆ ವರ್ಷದಿಂದ ಟಾರ್ಗೆಟ್ ಮಾಡ್ತಿದ್ದಾರೆ. ನಾನು ರಿಯಲ್ ಎಸ್ಟೇಟ್ ಏಜೆಂಟ್, ನನ್ನದೇ ಆದಾಯವಿದೆ. ಆದಾಯ ತೆರಿಗೆಯನ್ನು ಕೂಡ ನಾನು ಪಾವತಿಸಿದ್ದೇನೆ. ಬೆಳೆಯುತ್ತಿರುವವರನ್ನು ತುಳಿಯೋದಕ್ಕೆ ಈ ಕೃತ್ಯ ಮಾಡ್ತಿದ್ದಾರೆ. ಮನೆಯೊಳಗೆ ಏನೂ ಸಿಕ್ಕಿಲ್ಲ. ಸಿಕ್ಕಿರೋದಕ್ಕೆ ದಾಖಲೆ ನೀಡಿದ್ದೇನೆ. ಮೂರು ವರ್ಷದಿಂದ ಬಿಡಿಎ ಕಡೆಗೆ ನಾನು ಹೋಗುತ್ತಿಲ್ಲ. ಸೀನಿಯರ್ ಲೀಡರ್ ನಮ್ಮಂತಹವರ ಮೇಲೆ ಯಾಕೆ ದ್ವೇಷ ಸಾಧಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ನನ್ನ ಬಳಿ ಐದು ಕೋಟಿಯಷ್ಟು ಆಸ್ತಿಯಿದೆ. ಮನೆಯಲ್ಲಿ 4 ಕೆಜಿ ಚಿನ್ನ ಸಿಕ್ಕ ವಿಚಾರ ಸಂಬಂಧ ನಾನು 15 ವರ್ಷದಿಂದ ಚಿನ್ನ ಖರೀದಿಸಿದ್ದೇನೆ. ನಾನು ಕಾನೂನಾತ್ಮಕವಾಗಿದ್ದೇನೆ. ವಿಶ್ವನಾಥ್ ಕುಮ್ಮಕ್ಕಿನಿಂದ ಈ ದಾಳಿಯಾಗಿದೆ. ಕಾನೂನು ಹೋರಾಟ ಮಾಡುತ್ತೇನೆ ಎಂದರು. ಆರ್.ಟಿ.ನಗರದ ಮನೋರಾಯನಪಾಳ್ಯ ನಿವಾಸಿಯಾಗಿರುವ ಬಿಡಿಎ ಬ್ರೋಕರ್ ಮೋಹನ್ ಸುಲ್ತಾನ್ ಪಾಳ್ಯದಲ್ಲಿ 20 ವರ್ಷಗಳಿಂದ ಅಟೊಮೊಬೈಲ್ಸ್ ಅಂಗಡಿ ಇಟ್ಟುಕೊಂಡಿದ್ದರು. ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಬಿಡಿಎ ಅಧಿಕಾರಿ, ಸಿಬ್ಬಂದಿ ಜೊತೆಗೆ ಸಂಪರ್ಕ ಮಾಡಿಕೊಂಡು ಮಧ್ಯವರ್ತಿಯಾಗಿ ಕೋಟಿ ಕೋಟಿ ಹಣ ಗಳಿಸಿದ್ದಾರೆ ಎನ್ನಲಾಗಿದೆ.
ಇವರ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದೆ. 4.960 ಕೆ.ಜಿ.ಚಿನ್ನ, 15 ಕೆ.ಜಿ.ಬೆಳ್ಳಿ 61.9 ಗ್ರಾಂ ಡೈಮಂಡ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.