ಬೆಂಗಳೂರು: ಭ್ರಷ್ಟರ ಜತೆ ಸೇರಿ ಹಣ ಹೊಡೆಯೋಕೆ ಮುಂದಾಗಿದ್ದರೆನ್ನಲಾದ ಬಿಡಿಎ ಅಧಿಕಾರಿಗಳಿಗೆ ಆಯುಕ್ತರು ಬಿಸಿ ಮುಟ್ಟಿಸಿದ್ದು, ಪೋಲಾಗ್ತಿದ್ದ ಕೋಟ್ಯಂತರ ರೂ. ಹಣ ಉಳಿಸಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ಒಂದು ರಹಸ್ಯ ಪೆನ್ ಡ್ರೈವ್ ಮೂಲಕ ಅನ್ನೋದೇ ವಿಶೇಷ.
ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರೋ ರೆಧನ್ ದಿ ಸೆನೆಮಾ ಪೀಪಲ್ ಕಂಪನಿಯಲ್ಲಿ ಬಡವರಿಗೆ ನೀಡಬೇಕಿದ್ದ ನಿವೇಶನಗಳನ್ನು ಬಿಡಿಎ ಆಯುಕ್ತರ ಲೆಟರ್ ಹೆಡ್ ಬಳಸಿ ನಕಲಿ ಫಲಾನುಭವಿಗಳಿಗೆ ಸ್ವಾಧೀನ ಪತ್ರ ನೀಡಲಾಗುತ್ತಿತ್ತಂತೆ.
ಇದಕ್ಕೆ ಬಿಡಿಎನ ಕೆಲ ಅಧಿಕಾರಿಗಳು ಸಾಥ್ ನೀಡುತ್ತಿದ್ದರು ಅನ್ನೋ ಅಂಶಗಳೆಲ್ಲಾ ಪೆನ್ ಡ್ರೈವ್ನಲ್ಲಿತ್ತು ಎನ್ನಲಾಗಿದೆ. ಇದನ್ನು ಆಧರಿಸಿ ಇಂದು ಕಚೇರಿ ಮೇಲೆ ದಾಳಿ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ. ಅಷ್ಟೇ ಅಲ್ಲದೆ 60 ನಕಲಿ ಫಲಾನುಭವಿಗಳಿಗೆ ಸ್ವಾಧೀನ ಪತ್ರ ನೀಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಡೆದ ಬಿಡಿಎ ಬೋರ್ಡ್ ಮೀಟಿಂಗ್ನಲ್ಲಿ ಸ್ಲಂ ನಿವಾಸಿಗಳಿಗೆ ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿ ಬಿಡಿಎ ಜಾಗೃತ ದಳ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ.
ದಾಳಿ ವೇಳೆ 10 ಲಕ್ಷ ರೂ. ನಗದು, ಅಪಾರ ಪ್ರಮಾಣದ ಬಿಡಿಎ ಸಂಬಂಧಿತ ದಾಖಲೆಗಳು ದೊರೆತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಡಿಎ, ಭ್ರಷ್ಟರ ವಿರುದ್ಧ ಸಮರ ಸಾರಿದೆ. ಸದ್ಯ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಡಿಎನ ಐವರು ಹಾಗೂ ರೆಧನ್ ದಿ ಸೆನೆಮಾ ಪೀಪಲ್ ಕಂಪನಿಯ ಮಾಲೀಕ ಇಂದ್ರ ಕುಮಾರ್ ಅವರ ವಿಚಾರಣೆ ನಡೆಸಲಾಗುತ್ತಿದೆ.