ಬೆಂಗಳೂರು: ಬಿಬಿಎಂಪಿಗೆ ಬರಬೇಕಾದ ಆದಾಯ ಕ್ರೋಢೀಕರಣಕ್ಕೆ ಮೊದಲ ಆದ್ಯತೆ ನೀಡಲು ಮೇಯರ್ ಗೌತಮ್ ಕುಮಾರ್ ತೀರ್ಮಾನಿಸಿದ್ದಾರೆ.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿ, ಘನತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ಸರ್ಕಾರದ ಮುಂದೆ ಬೇಡಿಕೆ ಇಡುವ ಬದಲು, ತನ್ನ ವೆಚ್ಚಗಳಿಗೆ ಆದಾಯ ಕ್ರೋಢೀಕರಿಸಲು ತೀರ್ಮಾನಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ ಕಳೆದ ಹದಿನೆಂಟು ವರ್ಷಗಳಿಂದ ಬಾಕಿ ಇರುವ ಶುಲ್ಕವನ್ನು ಪಾವತಿಸುವಂತೆ ಬಿಬಿಎಂಪಿ, ಕಂದಾಯ ಇಲಾಖೆಗೆ ಪತ್ರ ಬರೆದಿದೆ.
ನಗರ ವ್ಯಾಪ್ತಿಯ ಆಸ್ತಿಗಳ ಮೇಲೆ ವಿಧಿಸಿರುವ ಅಧಿಭಾರ ಶುಲ್ಕವನ್ನು ಕಂದಾಯ ಇಲಾಖೆ ಆಯಾ ಸ್ಥಳೀಯ ಸಂಸ್ಥೆಗೆ ನೀಡದೆ ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಹಣವನ್ನು ತುರ್ತಾಗಿ ಪಾವತಿಸುವಂತೆ ಆಯುಕ್ತರ ಮುಖೇನ ಪತ್ರ ಕಳಿಸಲಾಗುತ್ತದೆ ಎಂದು ಮೇಯರ್ ತಿಳಿಸಿದರು.
ಇನ್ನು, ಕಂದಾಯ ಇಲಾಖೆ ಹೆಚ್ಚುವರಿ 239 ಕೋಟಿ ರೂ. ಶುಲ್ಕ ಪಾವತಿಸಿದ್ದು, ಬಳಿಕ ತಡೆಹಿಡಿಯಲಾಗಿದೆ. ಇದನ್ನು ಕಡಿತ ಮಾಡಿ ಉಳಿದ ಶುಲ್ಕವನ್ನು ಪಾವತಿಸಿದರೆ ಬಿಬಿಎಂಪಿಯು ಬಾಕಿ ಉಳಿಸಿ ಕೊಂಡಿರುವ ಗುತ್ತಿಗೆದಾರರ ಬಾಕಿ ಬಿಲ್ 2,250 ಕೋಟಿ ಪಾವತಿಸಬಹುದಾಗಿದೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ.