ಬೆಂಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ಬಿ ಖಾತಾ ಸ್ವತ್ತುಗಳನ್ನು ಎ ಖಾತಾಗೆ ಬದಲಾಯಿಸಲು ಪಾಲಿಕೆ ಮುಂದಾಗಿದೆ. ಸದ್ಯ 6.16ಲಕ್ಷ ಸ್ವತ್ತುಗಳು ಬಿ ಖಾತಾದಲ್ಲಿವೆ. ಬಿ ಇಂದ ಎ ಖಾತಾಗೆ ಸ್ವತ್ತುಗಳು ವರ್ಗಾವಣೆಗೊಂಡರೆ ಪಾಲಿಕೆಗೆ ಸಾವಿರಾರು ಕೋಟಿ ಆದಾಯ ಹರಿದು ಬರಲಿದೆ. ಬಿಬಿಎಂಪಿಗೆ 2,500 ಕೋಟಿಗೂ ಅಧಿಕ ಆದಾಯದ ನಿರೀಕ್ಷೆಯಿದೆ. ಈ ಸಂಬಂಧ ಶೀಘ್ರವೇ ಸರ್ಕಾರದಿಂದ ಮಾನದಂಡ ಪಟ್ಟಿ ಬಿಡುಗಡೆಯಾಗಲಿದೆ. ಚುನಾವಣೆಗೂ ಮೊದಲೇ ಖಾತಾ ವರ್ಗಾವಣೆ ಆರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಲಿಕೆಯ ಕೇಂದ್ರ ವಲಯದ ಭಾಗದಲ್ಲಿನ ಸ್ವತ್ತುಗಳಿಗೆ ಚದರ ಮೀಟರ್ಗೆ 200 ಹಾಗೂ ಹೊರ ವಲಯದಲ್ಲಿ 250 ರೂಪಾಯಿ ದರ ನಿಗದಿ ಮಾಡುವ ಸಾಧ್ಯತೆಯಿದೆ. ಈ ದರ ನಿಗದಿಯಾದರೆ ನಗರದ ಒಳಗೆ 30X40 ಸೈಟ್ಗೆ 22 ಸಾವಿರ ಹಾಗೂ ಹೊರ ಭಾಗದಲ್ಲಿ 27 ಸಾವಿರ ಶುಲ್ಕ ನಿಗದಿಯಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಚರ್ಚೆ : ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸರ್ಕಾರದಿಂದ ಸ್ಪಷ್ಟ ಆದೇಶ ಬಂದ ನಂತರ ನಿರ್ದೇಶನ ನೀಡಲಾಗುತ್ತದೆ. ಬಿ ಖಾತಾ ಇರುವ ಒಟ್ಟು ಆಸ್ತಿಗಳು 6 ಲಕ್ಷಕ್ಕೂ ಅಧಿಕ ಇದ್ದು, ಅವುಗಳನ್ನು ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದಿಂದ ಆದೇಶ ಬಂದ ನಂತರ ಆದಾಯ ಮತ್ತು ದಾಖಲೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಕ್ರಮ ಕಟ್ಟಡಗಳಿಗೆ ತಡೆ : ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಯಾಗುವುದರಿಂದ ಅಕ್ರಮ ಕಟ್ಟಡ ತಡೆಗಟ್ಟಲು ಸಹಾಯವಾಗುತ್ತದೆ. ಬಿ ಖಾತಾ ಸ್ವತ್ತಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕಡ್ಡಾಯವಲ್ಲ. ಎ ಖಾತಾ ಮಾಡಿದರೆ ನಿಗದಿ ಮಾಡಿದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಾಣಕ್ಕೆ ಕಡಿವಾಣ ಬೀಳಲಿದೆ. 30X40 ಜಾಗದಲ್ಲಿ ಗ್ರೌಂಡ್ ಫ್ಲೋರ್ ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶವಿದೆ. ಆದರೆ, ನಗರದಲ್ಲಿ 30X40 ಜಾಗದಲ್ಲಿ ಅದಕ್ಕೂ ಮೀರಿದ ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪರೂಪದ ಉತ್ಖನನ : ಚಾಮರಾಜನಗರದಲ್ಲಿ ಶಿಲಾಯುಗದ ಸಮಾಧಿಗಳು ಪತ್ತೆ
ಕಟ್ಟಡ ಮಾಲೀಕರಿಗೆ ಅನುಕೂಲ : ಬಿ ಖಾತಾ ಸ್ವತ್ತು ಎ ಖಾತಾ ವ್ಯಾಪ್ತಿಗೆ ಒಳಪಟ್ಟರೆ ಸ್ವತ್ತಿನ ಮಾಲೀಕರಿಗೂ ಅನುಕೂಲವಾಗಲಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಬಿಬಿಎಂಪಿಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.