ಬೆಂಗಳೂರು : ನಗರದಲ್ಲಿ ಸರಿಸೃಪಗಳ ಕಾಟ ಅಷ್ಟಿಷ್ಟಲ್ಲ. ಮಳೆ ಬಂದ್ರೆ, ಬಿಸಿಲಾದ್ರೆ ಸಾಕು ನೀರು ಹೆಚ್ಚಾದ ಚರಂಡಿಯಿಂದ ಬಿಸಿಲಿಗೆ ಹೊರಗಿರಲಾಗದೆ ತಂಪು ಜಾಗ ಹುಡುಕಿಗೊಂಡು ಮನೆಯೊಳಗೆ ಹಾವುಗಳು ಸೇರಿಕೊಳ್ಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಜೀವ ರಕ್ಷಕರಂತೆ ಮನೆ ಬಾಗಿಲಿಗೆ ಹೋಗಿ ಹಾವು ಹಿಡಿಯುವುದು ಬಿಬಿಎಂಪಿಯ ವನ್ಯಜೀವಿ ರಕ್ಷಕರ ತಂಡ.
ಆದ್ರೆ, ಬಿಬಿಎಂಪಿಯೇ ಇವರ ಕಡೆ ಕರುಣೆ ತೋರಿಸುತ್ತಿಲ್ಲ. ಕೊಡಬೇಕಾದ ಗೌರವ ಧನವನ್ನು 2 ವರ್ಷ 7 ತಿಂಗಳಾದರೂ ಕೊಟ್ಟಿಲ್ಲ. ಜನರ ಬಳಿಯೇ ದುಡ್ಡು ತಗೋತಾರೆ. ಮತ್ತೆ ಸಂಬಳ ಯಾಕೆ? ಎಂದು ಬಿಬಿಎಂಪಿ ವಾದ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸಮಯ ನೋಡದೆ, ಕರೆ ಬಂದಲ್ಲಿಗೆಲ್ಲ ಹೋಗಿ ಹಾವು ಹಿಡಿಯೋದು, ಅಲ್ಲಿ ಇಲ್ಲಿ ನೇತಾಡಿಕೊಂಡಿರುವ ಪಕ್ಷಿಗಳ ರಕ್ಷಣೆ ಮಾಡುತ್ತೇವೆ. ಆದರೆ, ನಮ್ಮ ಕೆಲಸಕ್ಕೆ ಸಂಭಾವನೆಯೇ ಇಲ್ಲ ಎಂದು ವನ್ಯಜೀವಿ ರಕ್ಷಕರ ತಂಡ ಬೇಸರ ವ್ಯಕ್ತಪಡಿಸಿದೆ.
ಪ್ರಾಣಾಪಾಯ ಲೆಕ್ಕಿಸದೆ ಕೆಲಸ ಮಾಡಿದರೂ, ಓಡಾಟ, ಇಂಧನ ಖರ್ಚಿಗಾದರು ಹಣ ಬೇಡವೇ?. ಬಿಬಿಎಂಪಿಯ ಅರಣ್ಯ ವಿಭಾಗ ಇದನ್ನು ನೋಡಿಕೊಳ್ಳಬೇಕು. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ಮುಂದೆ ಜನರಿಂದ ಕರೆ ಬಂದ್ರೆ ನಾವೂ ಹೋಗೋದಿಲ್ಲ. ನಮ್ಮ ಎಂಟು ಜನರ ತಂಡ ಸಂಬಳ ಕೊಡುವವರೆಗೆ ಕೆಲಸ ಮಾಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ವನ್ಯಜೀವಿ ಸಂರಕ್ಷಕ ತಂಡದ ಮೋಹನ್ ಎಚ್ಚರಿಕೆ ನೀಡಿದ್ದಾರೆ.