ಬೆಂಗಳೂರು: ಬಿಬಿಎಂಪಿಯ ಎಲ್ಲಾ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಇನ್ನು ಆರೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಆದರೆ, ಚುನಾವಣೆ ನಡೆಯುತ್ತಿಲ್ಲ. 2011ರ ಜನಗಣತಿ ಪ್ರಕಾರ ಹಾಗೂ ವಾರ್ಡ್ ಮರುವಿಂಗಡಣೆಯಂತೆ ಹೊಸ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸುತ್ತಿದೆ. ಇದರ ಮಧ್ಯೆ ನಿನ್ನೆ ಸಚಿವ ಸಂಪುಟದಲ್ಲಿ ಬಿಬಿಎಂಪಿಯ ವಾರ್ಡ್ಗಳನ್ನು 198 ರಿಂದ 225ಕ್ಕೆ ಹೆಚ್ಚಿಸುವ ಚರ್ಚೆಯೂ ನಡೆದಿದೆ.
ಈ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಬಿಬಿಎಂಪಿ ಚುನಾವಣೆ ನಡೆಸುವಂತೆ ನಾವು ಸೇರಿ ಹಲವು ಸದಸ್ಯರು ಕೋರ್ಟ್ ಮೆಟ್ಟಿಲೇರುತ್ತಿದ್ದೇವೆ. 60 ಹೊಸ ಹಳ್ಳಿಗಳನ್ನು ಸೇರಿಸುವ ಚಿಂತನೆ, 15 ವಲಯಕ್ಕೆ ಹೆಚ್ಚಿಸುವ ಯೋಚನೆ ಮಾರ್ಚ್ನಿಂದಲೂ ಸರ್ಕಾರಕ್ಕೆ ಇದೆ ಎಂದರು.
ಈಗಾಗಲೇ ಸೇರ್ಪಡೆಗೊಳಿಸಿರುವ ಹೊಸ 110 ಹಳ್ಳಿಗಳಿಗೆ ಮೂಲಸೌಕರ್ಯ ಇನ್ನೂ ಕೊಟ್ಟಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಆಗಿಲ್ಲ. ಇದೇ ಸರ್ಕಾರ 2007 ರಿಂದ 10ರವರೆಗೂ ಚುನಾವಣೆ ನಡೆಸಿರಲಿಲ್ಲ. ಬಿಎಂಪಿಯನ್ನು ಬಿಬಿಎಂಪಿ ಮಾಡುವ ಉದ್ದೇಶಕ್ಕೆ ಚುನಾವಣೆಯನ್ನು ಮುಂದೂಡಿಕೆ ಮಾಡಿತ್ತು. ಚುನಾವಣೆ ನಡೆಸಬಾರದು ಎಂಬ ಉದ್ದೇಶಕ್ಕೆ ಆಗಲೂ ಮಾಡಿದ್ದರು. ಕಡೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಚುನಾವಣೆ ಮಾಡಲು ನಿರ್ದೇಶಿಸಿತ್ತು ಎಂದು ಮಾಹಿತಿ ನೀಡಿದರು.
ಇದೀಗ ಪಾಲಿಕೆಯ ಸದಸ್ಯರ ಅವಧಿ ಮುಗಿಯುತ್ತಿರುವ ಸಂದರ್ಭದಲ್ಲಿ ಮತ್ತೆ 60 ಹಳ್ಳಿಗಳ ವಿಸ್ತರಣೆಗೆ ಮುಂದಾಗಿದೆ. ಬೆಂಗಳೂರು ವಿಸ್ತರಣೆಯಾದರೆ ಮೂಲಸೌಕರ್ಯ ಕೊಡಲು ಸರ್ಕಾರ ಸಿದ್ಧವಿಲ್ಲ. ಈ ಬಗ್ಗೆ ತಜ್ಞರ ಸಮಿತಿ ರಚಿಸಿಲ್ಲ. ಸಲಹೆಗಳನ್ನೂ ಕೇಳಿಲ್ಲ. ಈಗ ಬೆಂಗಳೂರಿಗೆ ಹೊಸ ಕಾಯ್ದೆ ತರುವ ವಿಚಾರಕ್ಕೆ ಜಂಟಿ ಸಮಿತಿ ನಿರ್ಮಾಣ ಆಗಿದ್ದು, ಅದರಲ್ಲಿ ಕೇವಲ ಶಾಸಕರಿದ್ದಾರೆ. ಆದರೆ ಮೂಲದಲ್ಲಿ ಕೆಲಸ ಮಾಡುವವರು ಕಾರ್ಪೊರೇಟರ್ಗಳು. ಅವರನ್ನೇ ಗಣನೆಗೆ ತೆಗೆದುಕೊಂಡಿಲ್ಲ. ಏನೇ ಅಭಿವೃದ್ಧಿ ಮಾಡಿದರೂ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ಮಾಡಿ. ಕೋರ್ಟ್ ಆದೇಶಗಳನ್ನು ಪಾಲಿಸಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರಕ್ಕೆ ದಾರಿ: ಹಳ್ಳಿಗಳಲ್ಲಿ ಎಕರೆ ಲೆಕ್ಕದಲ್ಲಿರುವ ಜಾಗವನ್ನು ಅಡಿ ಲೆಕ್ಕಕ್ಕೆ ತರುವ ಯೋಚನೆಯಲ್ಲಿದ್ದಾರೆ. ಬೆಂಗಳೂರಿಗೆ ಹೊಸ ಹಳ್ಳಿಗಳ ಸೇರ್ಪಡೆ ಭ್ರಷ್ಟಾಚಾರಕ್ಕೆ ದಾರಿ. ಇದೊಂದು ತಂತ್ರ ಅಷ್ಟೇ ಎಂದು ಟೀಕಿಸಿದರು. ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮೀಸಲಾತಿ ಸಿದ್ದಪಡಿಸದಿದ್ದರೆ ಎರಡು ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಹೈಕೋರ್ಟ್ ಮಾರ್ಚ್ನಲ್ಲಿ ತಿಳಿಸಿತ್ತು. ಹೀಗಾಗಿ ಕೋರ್ಟ್ ಭಯದಿಂದ ಮೀಸಲಾತಿಯನ್ನೂ ಸಿದ್ಧಪಡಿಸುತ್ತಿದೆ. ಇನ್ನೊಂದೆಡೆ ಹೊಸ ಬಿಬಿಎಂಪಿ ಬಿಲ್ ತರಲು ಮುಂದಾಗುತ್ತಿದೆ. ಆದರೆ ಚುನಾವಣೆ ನಡೆಸುವ ಚಿಂತನೆಯಲ್ಲಿ ಮಾತ್ರ ಇಲ್ಲ ಎಂದರು.