ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ಇಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಕೇಳಿ ಬಂದಿತು.
ಕಾರ್ಪೊರೇಟರ್ಗಳು ಫೈಲ್ ತೆಗೆದುಕೊಂಡು ಹೋದ್ರೆ ವಿಶೇಷ ಆಯುಕ್ತರು ಮನ್ನಣೆ ಕೊಡ್ತಿಲ್ಲ, ಮಂತ್ರಿಗಳ ಸಹಾಯಕ ಅಭಿಯಂತರನನ್ನು ವರ್ಗಾವಣೆ ಮಾಡಲು ಪತ್ರ ಕೊಟ್ಟಿದ್ದಾರೆ. ನಮ್ಮ ಕ್ಷೇತ್ರದ ಎಇ ವರ್ಗಾವಣೆ ಮಾಡಲು ಮಂತ್ರಿ ಶಿಫಾರಸ್ಸು ಮಾಡಿದ್ರು, ಅದೂ ಆಗಿಲ್ಲ ಎಂದು ಗೋವಿಂದರಾಜನಗರ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಈ ಬಗ್ಗೆ ಸ್ಪಷ್ಟನೆ ಕೊಟ್ಟ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, ಅನ್ಬುಕುಮಾರ್ ಉತ್ತಮ ಅಧಿಕಾರಿ. ಈ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ. ಅನ್ಬುಕುಮಾರ್ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಈ ವೇಳೆ ತಿಳಿಸಿದರು.
ಇನ್ನು ಅಧಿಕಾರಿಗಳು ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೇಳಿಕೆ ನೀಡುವಾಗ ಪಾಲಿಕೆ ಸದಸ್ಯರನ್ನು ಕಳ್ಳರು ಎಂಬಂತೆ ಬಿಂಬಿಸುತ್ತಾರೆ. ನಾವು ರಸ್ತೆ ಕ್ಲೀನ್ ಮಾಡಿಸುವಾಗ ನಮ್ಮ ಮೇಲೆಯೇ ಮಾರ್ಷಲ್ಗಳು ದಬ್ಬಾಳಿಕೆ ಮಾಡಲು ಬರುತ್ತಾರೆ. ಮಾರ್ಷಲ್ಗಳು ಬೇಡವೇ ಬೇಡ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಗ್ರಹಸಿದರು.
ಇದಕ್ಕೆ ವಿಶೇಷ ಅಧಿಕಾರಿ ರಂದೀಪ್ ಮಾತನಾಡಿ, ಪಾಲಿಕೆಗೆ ಮಾರ್ಷಲ್ಗಳು ಯಾಕೆ ಅಗತ್ಯ ಎಂದು ವಿವರಿಸಿದರು. ಮಾರ್ಷಲ್ಸ್ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಬೇಕು. ಆದ್ರೆ ಅಧಿಕಾರಿಗಳು, ಪಾಲಿಕೆ ಸದಸ್ಯರನ್ನು ಮೇಲ್ವಿಚಾರಣೆ ಮಾಡುವ ಹಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಇನ್ನು ಪಾಲಿಕೆ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, ಮಾರ್ಷಲ್ ಗಳ ನೇಮಕ ರದ್ದು ಮಾಡಲು ಸಾಧ್ಯವಿಲ್ಲ. ರಸ್ತೆಗುಂಡಿ ಮುಚ್ಚುವ ಕೆಲಸವನ್ನು ನೀಡಿದ ನಿಗದಿತ ಅವಧಿ ಒಳಗೆ ಮುಗಿಯೋದು ಅನುಮಾನ ಎಂದರು.