ಬೆಂಗಳೂರು : ವಿದೇಶಗಳಲ್ಲಿ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ವೇಗವಾಗಿ ಹರಡುತ್ತಿರುವ ಬಗ್ಗೆ ವರದಿಯಾಗುತ್ತಿದೆ. ನಗರದಲ್ಲಿಯೂ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಈಗಾಗಲೇ ದೇಶದ ಹಲವು ನಗರಗಳಲ್ಲಿ ಒಮಿಕ್ರಾನ್ ಪ್ರಕರಣ ಸಂಖ್ಯೆ ಏರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ನಗರ ಕೋವಿಡ್ ತಜ್ಞರ ಸಮಿತಿಯ ಅಧ್ಯಕ್ಷ ಗೌರವ್ ಗುಪ್ತಾ, ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತದೆ ಎಂಬ ವಿಚಾರ ತಿಳಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಬಹುತೇಕ ಪ್ರಕರಣ ಡೆಲ್ಟಾ ಬದಲು ಒಮಿಕ್ರಾನ್ ಬರಬಹುದು ಎಂದು ಯುಕೆ ಅಂದಾಜಿಸಿದೆ. ಈ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸಿದ್ಧತೆ ಮುಂದುವರೆಸಲಾಗುವುದು ಎಂದರು.
ಹೊರ ದೇಶದಿಂದ ಬರುವ ಎಲ್ಲರನ್ನು, ಅದರಲ್ಲಿಯೂ ಹೈರಿಸ್ಕ್ ಇರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ಟೆಸ್ಟ್ ಮಾಡಲಾಗುತ್ತಿದೆ. ಸದ್ಯ ಕೋವಿಡ್ ಪ್ರಕರಣದಲ್ಲಿ ಏರಿಕೆಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಅದಕ್ಕೆ ತಕ್ಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿದೇಶದಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ, ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಬಂದರೂ ಕ್ವಾರಂಟೈನ್ ಮಾಡಲು ಚಿಂತಿಸಲಾಗುತ್ತಿದೆ ಎಂದರು.
ಆಸ್ಪತ್ರೆಗಳಲ್ಲಿ ಎಷ್ಟು ಜನ ಕೋವಿಡ್ ರೋಗಿಗಳು ಇದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗಿದೆ. ಸದ್ಯ 300 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 3 ಸಾವಿರ ಹಾಸಿಗೆಗಳನ್ನು ಕೋವಿಡ್ ಹಾಗೂ ಒಮಿಕ್ರಾನ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಮುಂಬರುವ ದಿನಗಳಲ್ಲಿ 300ಕ್ಕಿಂತ ಹೆಚ್ಚು ಜನರು ದಾಖಲಾದರೆ, ಇನ್ನಷ್ಟು ಹಾಸಿಗೆಗಳನ್ನು ಮೀಸಲಿಡಲಾಗುವುದು ಎಂದರು.
ಇನ್ನು ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದರಿಂದ ಕೂಡಲೇ ಸೋಂಕನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಉತ್ತಮ ಎಂದು ಗೌರವ್ ಗುಪ್ತಾ ಸಲಹೆ ನೀಡಿದರು.
ಇದನ್ನೂ ಓದಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕೆಲಸ ಕಳೆದುಕೊಳ್ಳಲಿದ್ದಾರಾ ಗೂಗಲ್ ಉದ್ಯೋಗಿಗಳು?