ಬೆಂಗಳೂರು: 40 ಪರ್ಸೆಂಟ್ ಕಮಿಷನ್ ಮತ್ತೆ ಸದ್ದು ಮಾಡುತ್ತಿದೆ. ರಸ್ತೆ ಕಾಮಗಾರಿ ಮಾತ್ರವಲ್ಲದೇ ಕಟ್ಟಡಗಳ ನಿರ್ಮಾಣದಲ್ಲೂ ಬಿಬಿಎಂಪಿ ಕಮಿಷನ್ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈಗ ಕಳಪೆ ಕಾಮಗಾರಿಯಿಂದ ಪಾಲಿಕೆಯ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡಗಳು ಅವ್ಯವಸ್ಥೆಗಳ ಆಗರವಾಗುತ್ತಿವೆ. ನಿರ್ವಹಣೆಯ ಟೆಂಡರ್ ಪಡೆಯಲು ಕಂಪನಿಗಳು ಹಿಂದೇಟು ಹಾಕುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಚಿಕ್ಕಪೇಟೆ, ಗಾಂಧಿ ನಗರ, ಮೆಜೆಸ್ಟಿಕ್ ನಂತಹ ಬೆಂಗಳೂರಿನ ಹಾಟ್ಸ್ಪಾಟ್ಗಳಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವವರಿಗೆ ವಾಹನಗಳ ಪಾರ್ಕಿಂಗ್ ದೊಡ್ಡ ತಲೆ ಬಿಸಿಯಾಗಿರುತ್ತದೆ. ಈ ಪ್ರಮುಖ ಏರಿಯಾಗಳಿಗೆ ಬಂದು ಹೋಗುವ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಫ್ರೀಡಂ ಪಾರ್ಕ್ ಬಳಿ ಮಲ್ಟಿ ಲೆವೆಲ್ ಬೃಹತ್ ಪಾರ್ಕಿಂಗ್ ಕಟ್ಟಡ ನಿರ್ಮಿಸಿದೆ. ಆದರೆ, ಉದ್ಘಾಟನೆಯೇ ಆಗದೆ ಬಹುಮಹಡಿ ಕಟ್ಟಡ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸೋರಲು ಶುರುವಾಗಿದೆ.
ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಫ್ರೀಡಂ ಪಾರ್ಕ್ ಬಳಿ ಇರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಕಾಮಗಾರಿ ಶೇ.95 ರಷ್ಟು ಮುಗಿದಿದ್ದು, ಉದ್ಘಾಟನೆ ಸಿದ್ಧವಾಗಿದೆ. ಆದರೆ, ಅದಕ್ಕೂ ಮುನ್ನವೇ ಕಳಪೆ ಕಾಮಗಾರಿಯಿಂದ 3 ಅಂತಸ್ತಿನ ಕಟ್ಟಡದಲ್ಲಿ ಬಿರುಕು ಮೂಡಿದೆ. ಅಲ್ಲದೇ ಕಳಪೆ ಕಾಮಗಾರಿಯ ವಾಸನೆ ಕಂಡುಬರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಆರೋಪಿಸಿದ್ದಾರೆ.
ಪಾರ್ಕಿಂಗ್ ಟೆಂಡರ್ ಕರೆದ ಬಿಬಿಎಂಪಿ: ಸೋರಿಕೆ, ಬಿರುಕಿನ ನಡುವೆ ಬಿಬಿಎಂಪಿ ಖಾಸಗಿಯವರೆಗೆ ಪಾರ್ಕಿಂಗ್ ನಿರ್ವಹಣೆ ಮಾಡಲು ಟೆಂಡರ್ ಕರೆದಿದೆ. 5 ವರ್ಷಕ್ಕೆ ಪಾರ್ಕಿಂಗ್ ನಿರ್ವಹಣೆ ಮಾಡಲು ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ. ಸುಮಾರು 2 ಕೋಟಿ ಡೆಪಾಸಿಟ್ ಮಾಡಬೇಕಿದೆ. 4 ಖಾಸಗಿ ಕಂಪನಿಗಳು ಪಾರ್ಕಿಂಗ್ ನಿರ್ವಹಣೆ ಮಾಡಲು ಅರ್ಜಿ ಸಲ್ಲಿಸಿದ್ದವು. ಆದರೆ, ನೀರು ಸೋರಿಕೆ ಆಗುತ್ತಿರುವುದನ್ನು ನೋಡಿ ಖಾಸಗಿ ಕಂಪನಿಗಳು ಅರ್ಜಿ ವಾಪಸ್ ಪಡೆದಿವೆ ಎನ್ನಲಾಗ್ತಿದೆ.
2015 ರಲ್ಲಿ ಈ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಬಿಬಿಎಂಪಿ ಕೆ.ಎಂ.ವಿ ಎಂಬ ಕಂಪನಿಗೆ ಬರೋಬ್ಬರಿ 80 ಕೋಟಿಗೆ ಕಟ್ಟಡ ನಿರ್ಮಾಣದ ಟೆಂಡರ್ ನೀಡಿತ್ತು. ಸದ್ಯ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಬಹುತೇಕ ಮುಗಿದು 8 ತಿಂಗಳು ಕಳೆದಿದೆ.
ಕಾಮಗಾರಿಯ ಹಣ ನೀಡಲು ಪಾಲಿಕೆ ಹಿಂದೇಟು: ಕಳಪೆ ಕಾಮಗಾರಿ ಮಾಡಿಸಿರುವ ಪಾಲಿಕೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರೊಂದಿಗೆ ಗುತ್ತಿಗೆದಾರರಿಗೆ ಪಾಲಿಕೆ ಬಾಕಿ ಹಣ ಉಳಿಸಿಕೊಂಡಿದೆ. ಕೂಡಲೇ ಪಾವತಿ ಮಾಡದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಾರದೊಳಗೆ ಬಿಬಿಎಂಪಿ ವಾರ್ಡ್ ಮೀಸಲು ಪಟ್ಟಿ ಪ್ರಕಟಿಸಿ.. ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ