ಬೆಂಗಳೂರು: ಕೊರೊನಾ ವೈರಸ್ ಉಂಟುಮಾಡಿರುವ ತಲ್ಲಣದಿಂದಾಗಿ ಎಲ್ಲಾ ವಿಭಾಗಗಳಿಗೂ ಗ್ರಹಣ ಬಡಿದಂತಾಗಿದ್ದು, 2019-20ನೇ ಸಾಲಿನ ಆರ್ಥಿಕ ವರ್ಷ ನಿನ್ನೆಗೆ ಮುಗಿದಿದ್ದರೂ ಬಿಬಿಎಂಪಿಗೆ 20-21ನೇ ಸಾಲಿನ ಬಜೆಟ್ ಮಂಡನೆ ಸಾಧ್ಯವಾಗಿಲ್ಲ.
ಸೆಪ್ಟೆಂಬರ್ನಲ್ಲಿ ಈ ಅವಧಿಯ ಕೌನ್ಸಿಲ್ನ ಅಧಿಕಾರ ಮುಗಿಯಲಿದ್ದು, ಬಜೆಟ್ ಮಂಡನೆಯಾಗಿ ಅನುಮೋದನೆಯಾಗಿ ಬಂದ ಮೇಲೆ ಕಾಮಗಾರಿ ನಡೆಸುವುದರಲ್ಲಿ ವಿಳಂಬವಾಗಲಿದೆ. ಇನ್ನು 19-20ನೇ ಸಾಲಿನ ತೆರಿಗೆ ಗುರಿ ಕೂಡಾ ಶೇ. 70ರಷ್ಟು ತಲುಪಲು ಮಾತ್ರ ಸಾಧ್ಯವಾಗಿದೆ. ಹಿಂದಿನ ವರ್ಷಗಳ ಬಾಕಿ 2480.58 ಕೋಟಿ ರೂ. ಸೇರಿ 19-20ನೇ ಸಾಲಿನಲ್ಲಿ ಒಟ್ಟು 4929.89 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ನಿನ್ನೆವರೆಗೆ ಒಟ್ಟು 2647.83 ಕೋಟಿ ರೂಪಾಯಿ ಮಾತ್ರ ತೆರಿಗೆ ಸಂಗ್ರವಾಗಿದೆ. ಪ್ರತಿ ವರ್ಷ ಹೆಚ್ಚು ತೆರಿಗೆ ಸಂದಾಯ ಆಗೋದು ಮಾರ್ಚ್ನಲ್ಲಿ. ಆದರೆ, ಈ ತಿಂಗಳಲ್ಲೇ ಕೊರೊನಾ ಕಾರಣದಿಂದ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಪಾಲಿಕೆ ತೆರಿಗೆ ಸಂಗ್ರಹಕ್ಕೂ ಹೊಡೆತ ಬಿದ್ದಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ದಿನನಿತ್ಯದ ಸರಕು ಸಾಮಾಗ್ರಿ ಸರಬರಾಜು ಮಾಡಲು, ವೈದ್ಯಕೀಯ ಸಲಕರಣೆ ಖರೀದಿ ಇತ್ಯಾದಿಗಳಿಗೆ ತುರ್ತಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ವಿಪಕ್ಷ ನಾಯಕ ವಾಜಿದ್ ಮನವಿ ಮಾಡಿದ್ದಾರೆ.
ಈಗಾಗಲೇ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಬಜೆಟ್ ಸಹ ಮಂಡನೆಯಾಗಿಲ್ಲ. ಇಂತಹ ಸಂದರ್ಭದಲ್ಲಿ 20-21ನೇ ಸಾಲಿನ ಬಜೆಟ್ನ ಶೇಕಡಾ 10ರಷ್ಟು ಅನುದಾನ ಬಳಸಿಕೊಳ್ಳಲು ಆಯುಕ್ತರಿಗೆ ಅಧಿಕಾರ ನೀಡಬೇಕು. ಬಿಬಿಎಂಪಿ ಹಾಗೂ ಸರ್ಕಾರ ಒಪ್ಪಿಕೊಳ್ಳಬೇಕೆಂದು ಮನವಿ ಮಾಡಿ ವಿಪಕ್ಷ ನಾಯಕ ವಾಜಿದ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.