ಬೆಂಗಳೂರು: ಕರ್ನಾಟಕ ಮುನಿಸಿಪಲ್ ಆಕ್ಟ್ನಿಂದ ಬಿಬಿಎಂಪಿ ಹೊರಗೆ ತಂದು ಬಿಬಿಎಂಪಿ ಬಿಲ್ ಮಂಡನೆ ಮಾಡುವ ವಿಚಾರವಾಗಿ ವಿಧಾನಸೌಧದಲ್ಲಿಂದು ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಬಿಬಿಎಂಪಿ ಜಂಟಿ ಸದನ ಸಮಿತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಬಿಬಿಎಂಪಿ ವಾರ್ಡ್ ವಿಂಗಡಣೆ ಮತ್ತು ಬಿಲ್ ಮಂಡನೆಯಿಂದಾಗುವ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು. ಹೈಕೋರ್ಟ್ ಆದೇಶ ಹಿನ್ನೆಲೆ ಬಿಬಿಎಂಪಿ ಚುನಾವಣೆ ಮುಂದೂಡುವ ತಂತ್ರ ಮಾಡುತ್ತಿರುವ ಬೆಂಗಳೂರು ಶಾಸಕರು ಈ ಒಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಓದಿ-ಸದ್ಯ ಬಿಬಿಎಂಪಿ ಚುನಾವಣೆ ನಡೆಸುವ ಪ್ರಶ್ನೆಯೇ ಇಲ್ಲ : ಸಚಿವ ಆರ್ .ಅಶೋಕ್ ಸ್ಪಷ್ಟನೆ
ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಬೆಂಗಳೂರಿನ ಮೂರು ಪಕ್ಷಗಳ ಶಾಸಕರ ನಿಲುವು ಒಂದೇ ಆಗಿದೆ. ಬಿಬಿಎಂಪಿ ಚುನಾವಣೆಗೆ ಯಾರಿಗೂ ಅಂತಹ ಆಸಕ್ತಿ, ಉತ್ಸಾಹ ಇಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋಗಲು ತಂತ್ರಗಾರಿಕೆ ಮಾಡ್ತಿರುವ ಶಾಸಕರು, ಬಿಬಿಎಂಪಿ ನ್ಯೂ ಬಿಲ್ ಪಾಸ್ ಮಾಡಿ ಸುಪ್ರೀಂ ಕದ ತಟ್ಟುವ ಯೋಚನೆಯಲ್ಲಿದ್ದಾರೆ ಎನ್ನಲಾಗ್ತಿದೆ.
ಸಭೆ ಮುಕ್ತಾಯದ ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ, ನಮಗೆ ಚುನಾವಣೆ ಮುಂದೂಡುವ ಉದ್ದೇಶ ಇಲ್ಲ, ಅದಕ್ಕಾಗಿ ಸಭೆ ಮಾಡಿಲ್ಲ. ಚುನಾವಣೆ ಕುರಿತ ಸಭೆಯಾಗಿದ್ದರೆ ಕಾಂಗ್ರೆಸ್ ಶಾಸಕರು ಇರುತ್ತಿದ್ರಾ? ವಾರ್ಡ್ಗಳ ಸಂಖ್ಯೆ 243ಕ್ಕೆ ಹೆಚ್ಚಿಸಿದ ನಂತರವೇ ಚುನಾವಣೆ ಆಗಬೇಕು ಅನ್ನೋದು ಸಭೆಯ ಸರ್ವಾನುಮತದ ಅಭಿಪ್ರಾಯ. ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದರು.